ಟಿ20 ವಿಶ್ವಕಪ್ ಸೂಪರ್ 12| ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರಿಗೆ ಹೀನಾಯ ಸೋಲು

Prasthutha|

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಪ್ರಧಾನ ಹಂತ ʻಸೂಪರ್ 12ʼನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹೀನಾಯ ಸೋಲು ಅನುಭವಿಸಿದೆ. ಆಸೀಸ್ ತಂಡವನ್ನು ಅವರದ್ದೇ ನೆಲದಲ್ಲಿ 89 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ನ್ಯೂಜಿಲೆಂಡ್, ಅಮೋಘ ಆರಂಭ ಪಡೆದಿದೆ.

- Advertisement -

ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಿಚೆಲ್ ಸ್ಯಾಟ್ನರ್ ಮತ್ತು ಟಿಮ್ ಸೌಥಿ ಬೌಲಿಂಗ್ ಎದುರು ಪೆವಿಲಿಯನ್ ಪರೇಡ್ ನಡೆಸಿದ ಆರೋನ್ ಫಿಂಚ್ ಪಡೆ 17.1 ಓವರ್‌ಗಳಲ್ಲಿ 111 ರನ್ ಗಳಿಸುವಷ್ಟರಲಿ ಸರ್ವಪತನ ಕಂಡಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನ್ಯೂಜಿಲಂಡ್ ಕೀವಿಸ್, ಡೆವೊನ್ ಕಾನ್ವೆ ಗಳಿಸಿದ ಬಿರುಸಿನ 92 ರನ್ ಗಳ ನೆರವಿನಿಂದ ಕೇವಲ 3 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿತ್ತು. ಟಿ20 ವಿಶ್ವಕಪ್ ಕೂಟದಲ್ಲಿ ಕೀವಿಸ್ ತಂಡ ದಾಖಲಿಸಿದ ಮೊತ್ತ ಇದಾಗಿದೆ.

- Advertisement -

ಕಠಿಣ ಗುರಿಯನ್ನು ಬೆನ್ನಟ್ಟುವ ವೇಳೆ ಆರಂಭದಲ್ಲೇ ಆತಿಥೇಯರು, ನಿಯಮಿತವಾಗಿ ವಿಕೆಟ್ ಕೊಳ್ಳುತ್ತಲೇ ಸಾಗಿದರು. ಆರಂಭಿಕರಾದ ಅನುಭವಿ ಡೇವಿಡ್ ವಾರ್ನರ್ (5 ರನ್) ಮತ್ತು ನಾಯಕ ಆರೋನ್ ಫಿಂಚ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್ ವೆಲ್ (28 ರನ್) ಅವರದ್ದೇ ಸರ್ವಾಧಿಕ ಗಳಿಕೆ. ಉಳಿದಂತೆ ಪ್ಯಾಟ್ ಕಮ್ಮಿನ್ಸ್ 21 ರನ್, ಮಿಚೆಲ್ ಮಾರ್ಶ್ 16 ರನ್ ಗಳಿಸಿ ನಿರ್ಗಮಿಸಿದರು.

ನ್ಯೂಜಿಲೆಂಡ್ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಯಾಟ್ನರ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಕಿತ್ತು ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. 2-1 ಓವರ್ಗಳ ದಾಳಿಯಲ್ಲಿ ಸೌಥಿ ಕೇವಲ 6 ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು. ಟ್ರೆಂಟ್ ಬೌಲ್ಟ್ 2 ಮತ್ತು ಲೂಕಿ ಫರ್ಗ್ಯೂಸನ್ ಮತ್ತು ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.

ಮೊದಲ ಓವರ್‌ನಲ್ಲೇ ವಿಶ್ವದಾಖಲೆ !

ಈ ನಡುವೆ ಈ ಬಾರಿಯ ಟಿ20 ವಿಶ್ವಕಪ್ನ ʻಸೂಪರ್ 12ʼನ ಮೊದಲ ಪಂದ್ಯದಲ್ಲೇ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ. ಮಿಚೆಲ್ ಮಾರ್ಷ್ ಎಸೆದ ಇನ್ನಿಂಗ್ಸ್ ಪ್ರಥಮ ಓವರ್ ನಲ್ಲಿ ನ್ಯೂಜಿಲೆಂಡ್ನ ಆರಂಭಿಕ ಬ್ಯಾಟ್ಸ್ ಮನ್ ಫಿನ್ ಆಲೆನ್, 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 14 ರನ್ ಗಳಿಸಿದರು. ಇದು ಟಿ20 ವಿಶ್ವಕಪ್ ಚರಿತ್ರೆಯಲ್ಲೇ ಮೊದಲ ಓವರ್‌ನಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿ ದಾಖಲಾಯಿತು.



Join Whatsapp