ಟಿ20 ವಿಶ್ವಕಪ್|  ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ  ವಿರುದ್ಧ ನಮೀಬಿಯಾಗೆ ಚೊಚ್ಚಲ, ಅಚ್ಚರಿಯ ಗೆಲುವು

Prasthutha|

ಚುಟುಕು ಕ್ರಿಕೆಟ್ ಮಹಾಸಂಗಮದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಶು ನಮೀಬಿಯಾ, ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ತಂಡವನ್ನು 55 ರನ್ಗಳಿಂದ ಭರ್ಜರಿಯಾಗಿ ಮಣಿಸಿದೆ. ನಮೀಬಿಯಾ ತಂಡಕ್ಕೆ ಇದು ಅಚ್ಚರಿಯ ಜಯವಾದರೆ, ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಲಂಕಾ ಪಾಲಿಗೆ ಆಘಾತ ಉಂಟುಮಾಡಿದೆ. 

- Advertisement -

ಆಸ್ಟ್ರೇಲಿಯಾದ ಗೀಲಾಂಗ್ನಲ್ಲಿ ಟಾಸ್ ಗೆದ್ದ ದಾಸುನ್ ಶನಕ, ನಮೀಬಿಯಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. 15ನೇ ಓವರ್ನಲ್ಲಿ 93 ರನ್ಗಳಿಸುವಷ್ಟರಲ್ಲಿ ನಮೀಬಿಯಾದ 6 ಬ್ಯಾಟರ್ಗಳು ಪೆವಿವಿಲಿಯನ್ ಸೇರಿದ್ದರು. ಆದರೆ ಆ ಬಳಿಕ ಒಂದಾದ ಜಾನ್ ಫ್ರಿಲಿಂಕ್ 44 ರನ್ (28 ಎಸೆತ, 4×4)  ಮತ್ತು ಸ್ಮಿತ್ ಕೇವಲ 16 ಎಸೆತಗಳಲ್ಲಿ 31 ರನ್ಗಳಿಸಿ (4×2, 6×2) ತಂಡ ಸ್ಮರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅಂತಿಮ 37 ಎಸೆತಗಳಲ್ಲಿ 70 ರನ್ ಗಳಿಸಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಅಂತಿಮವಾಗಿ ಗೆರ್ಹಾರ್ಡ್ ಎರಾಸ್ಮಸ್ ಬಳಗ 7 ವಿಕೆಟ್ ನಷ್ಟದಲ್ಲಿ 163 ರನ್ಗಳಿಸಿತ್ತು.

ಆದರೆ ಚೇಸಿಂಗ್ ವೇಳೆ ಶ್ರೀಲಂಕಾ, 19 ಓವರ್ಗಳಲ್ಲಿ ಕೇವಲ 108 ರನ್ಗಳಿಗೆ ಆಲೌಟಾಯಿತು. ನಮೀಬಿಯಾದ ಯುವ ಬೌಲಿಂಗ್ ವಿಭಾಗದ ಎದುರು ರನ್ಗಳಿಸಿಲು ಪರದಾಡಿದ ಲಂಕಾ, ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ನಾಯಕ ದಾಸುನ್ ಶನಕ 29 ರನ್ಗಳಿಸಿ ತುಸು ಹೋರಾಟ ಪ್ರದರ್ಶಿಸಿದರಾದರೂ, ಉಳಿದವರ ಬೆಂಬಲ ದೊರೆಯಲಿಲ್ಲ. ಇಬ್ಬರು ಶೂನ್ಯಕ್ಕೆ ನಿರ್ಗಮಿಸಿದರೆ, ಐವರು ಎರಡಂಕಿಯ ಮೊತ್ತವನ್ನೇ ದಾಟಲಿಲ್ಲ.

- Advertisement -

ಬೆನ್ ಶಿಕೊಂಗೊ, 4ನೇ ಓವರ್ನಲ್ಲಿ ಧನುಷ್ಕಾ ಗುಣತಿಲಕ ಮತ್ತು ಪಾಥುಮ್ ನಿಸ್ಸಾಂಕ ವಿಕೆಟ್ ಪಡೆಯುವ ಮೂಲಕ ರನ್ಬೇಟೆಗೆ ಕಡಿವಾಣ ಹಾಕಿದರು. ಬರ್ನಾರ್ಡ್ ಸ್ಕೋಲ್ಟ್ಜ್, ಡೇವಿಡ್ ವೈಸ್ ಮತ್ತು ಫ್ರಿಲಿಂಕ್ ತಲಾ ಎರಡು ವಿಕೆಟ್ ಪಡೆದರು.

ಇತ್ತೀಚಗಷ್ಟೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಶ್ರೀಲಂಕಾಗೆ ನಮೀಬಿಯಾ ಸುಲಭ ತುತ್ತಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ ನಮೀಬಿಯಾ ಎರಡು ಅಮೂಲ್ಯ ಅಂಕಗಳನ್ನು ಸಂಪಾದಿಸಿತು.

ಎ ಮತ್ತು ಬಿ ಗುಂಪಿನಿಂದ ತಲಾ ಎರಡು ತಂಡಗಳು ಅಕ್ಟೋಬರ್ 22 ರಂದು ಪ್ರಾರಂಭವಾಗುವ ಸೂಪರ್ 12 ಗೆ ಅರ್ಹತೆ ಪಡೆಯಲಿವೆ.  ಎ ಗುಂಪಿನಲ್ಲಿ ನೆದರ್ಲ್ಯಾಂಡ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಜೊತೆಗೆ ಶ್ರೀಲಂಕಾ ಮತ್ತು ನಮೀಬಿಯಾ ಸ್ಥಾನ ಪಡೆದಿದೆ.  ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಐರ್ಲೆಂಡ್ ಬಿ ಗುಂಪಿನಲ್ಲಿವೆ.

2021 ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ನಮೀಬಿಯಾ, ಎರಡನೇ ತಂಡವಾಗಿ ಪ್ರಧಾನ ಸುತ್ತಿಗೆ ಅರ್ಹತೆ ಗಳಿಸಿತು. ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಗಳನ್ನು ಒಳಗೊಂಡಿದ್ದ ಗುಂಪಿನಲ್ಲಿ ಶ್ರೀಲಂಕಾದ ಮೊದಲ ಸ್ಥಾನ ಗಳಿಸಿತು.

Join Whatsapp