ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಮೊದಲ ತಂಡವಾಗಿ ನ್ಯೂಜಿಲೆಂಡ್ ಅರ್ಹತೆ ಪಡೆದಿದ್ದು, ಆ ಮೂಲಕ ಇಂಗ್ಲೆಂಡ್ – ಶ್ರೀಲಂಕಾ ಪಂದ್ಯದ ಫಲಿತಾಂಶದ ಮೇಲೆ ಆಸ್ಟ್ರೇಲಿಯಾ ಭವಿಷ್ಯ ನಿರ್ಧಾರವಗಾಲಿದೆ.
ಸೂಪರ್ 12, ಗ್ರೂಪ್ 1ರಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್, ಐರ್ಲೆಂಡ್ ವಿರುದ್ಧ, 35 ರನ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಸೂಪರ್ 12 ಹಂತದ ಎಲ್ಲಾ 5 ಪಂದ್ಯಗಳನ್ನು ಮುಗಿಸಿರುವ ನ್ಯೂಜಿಲೆಂಡ್, 7 ಅಂಕಗಳೊಂದಿಗೆ ಗ್ರೂಪ್ 1ರಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. +2.113 ರನ್ ರೇಟ್ ಹೊಂದಿರುವುದು ನ್ಯೂಜಿಲೆಂಡ್ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದೆ.
ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ವಿರುದ್ಧ 4 ರನ್ ಅಂತರದಲ್ಲಿ ರೋಚಕ ಜಯ ಸಾಧಿಸಿತ್ತು. ಆ ಮೂಲಕ 5 ಪಂದ್ಯಗಳಿಂದ 7 ಅಂಕಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಆದರೆ ಮೈನಸ್ ರನ್ ರೇಟ್ ಆಸ್ಟ್ರೇಲಿಯಾ ಪಾಲಿಗೆ ಮುಳುವಾಗುವ ಸಾಧ್ಯತೆ ಇದೆ. ಹೀಗಾಗಿ ಶನಿವಾರ ಸಿಡ್ನಿಯಲ್ಲಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಗೆಲುವಿಗೆ ಅಥವಾ ಮಳೆಯಿಂದ ಪಂದ್ಯ ರದ್ದಾಗಲು ಆಸ್ಟ್ರೇಲಿಯಾ ಪ್ರಾರ್ಥಿಸಬೇಕಾಗಿದೆ.
ಸೂಪರ್ 12 ಹಂತದ ಗ್ರೂಪ್ 1ರ ಕೊನೆಯ ಪಂದ್ಯ ಇಂಗ್ಲೆಂಡ್-ಶ್ರೀಲಂಕಾ ತಂಡಗಳ ನಡುವೆ ಶನಿವಾರ ನಡೆಯಲಿದೆ. ಈ ಪಂದ್ಯದಲ್ಲಿ ಜಾಸ್ ಬಟ್ಲರ್ ಬಳಗ ಜಯ ಸಾಧಿಸಿದರೆ, ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಜೊತೆ 7 ಅಂಕಗಳೊಂದಿಗೆ ಸಮಬಲ ಸಾಧಿಸಲಿದೆ. ಆದರೆ ಇಂಗ್ಲೆಂಡ್ (+0.547) ಆಸ್ಟ್ರೇಲಿಯಾ ತಂಡಕ್ಕಿಂತ (-0.173) ಉತ್ತಮ ರನ್‌ರೇಟ್ ಹೊಂದಿದೆ. ಹೀಗಾಗಿ ಇಂಗ್ಲೆಂಡ್ ಸೆಮಿ ಪ್ರವೇಶ ಸುಲಭವಾಗಲಿದೆ. ಆದರೆ ಏಷ್ಯಾ ಚಾಂಪಿಯನ್ನರು ಆಂಗ್ಲ ಪಡೆಯನ್ನು ಬಗ್ಗುಬಡಿದರೆ, ಇದರ ಫಲವಾಗಿ ಆಸ್ಟೇಲಿಯಾ ಸೆಮಿ ಫೈನಲ್ ಟಿಕೆಟ್ ಪಡೆಯಲಿದೆ.
ಇಂಗ್ಲೆಂಡ್-ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಮಳೆಯಿಂದ ರದ್ದಾದರೂ ಆಸ್ಟ್ರೇಲಿಯಾ ಸೆಮಿಪೈನಲ್‌ಗೆ ಅರ್ಹತೆ ಪಡೆಯಲಿದೆ.