ಟಿ20 ಸರಣಿ | ಮೊಹಾಲಿಯಲ್ಲಿ ಆಸ್ಟ್ರೇಲಿಯಾ-ಟೀಮ್‌ ಇಂಡಿಯಾ ಮೊದಲ ಕದನ

Prasthutha|

ಮೊಹಾಲಿ: ಏಷ್ಯಾ ಕಪ್‌ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ ಹೊರಬಿದ್ದಿದ್ದ ಭಾರತ, ಮಂಗಳವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ 20 ಸರಣಿಯ ಮೊದಲ ಪಂದ್ಯದಲ್ಲಿ, ಮೊಹಾಲಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. ಉಳಿದ ಎರಡು ಪಂದ್ಯಗಳು ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್‌ನಲ್ಲಿ (ಸೆಪ್ಟೆಂಬರ್ 25) ನಡೆಯಲಿವೆ.

- Advertisement -

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಟೂರ್ನಿಗೆ ಸಜ್ಜಾಗಲು ಟೀಮ್‌ ಇಂಡಿಯಾಗೆ ಉತ್ತಮ ಅವಕಾಶ ಕ‌ಲ್ಪಿಸಿದೆ.

ಭಾರತದ ಬ್ಯಾಟಿಂಗ್‌ ಕ್ರಮಾಂಕ ಗೊಂದಲ

- Advertisement -

ಏಷ್ಯಾಕಪ್‌ ನಲ್ಲಿ ಟೀಮ್‌ ಇಂಡಿಯಾ ಪರ ಇನ್ನಿಂಗ್ಸ್‌ ಆರಂಭಿಸಿದ್ದ ನಾಯಕ ರೋಹಿತ್‌ ಶರ್ಮಾ ಮತ್ತು ಕೆ.ಎಲ್‌. ರಾಹುಲ್‌ ದೊಡ್ಡ ಮೊತ್ತದ ಇನ್ನಿಂಗ್ಸ್‌ ಆಡುವಲ್ಲಿ ವಿಫಲರಾಗಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಆಡುವ ಮಾಜಿ ನಾಯಕ ಕೊಹ್ಲಿ ಫಾರ್ಮ್‌ ಕಂಡುಕೊಳ್ಳುವಲ್ಲಿ ಸಫಲರಾಗಿದ್ದರು. ಏಷ್ಯಾ ಕಪ್‌ನಲ್ಲಿ 5 ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕದ ನರವಿನಿಂದ ಒಟ್ಟು 276 ರನ್‌ಗಳನ್ನು ಸಿಡಿಸಿ, ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಅಫ್ಘಾನಿಸ್ತಾನದ ವಿರುದ್ಧದ ಅಂತಿಮ ಪಂದ್ಯದಲ್ಲಿ ರೋಹಿತ್‌ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್‌ ಆರಂಭಿಸಿದ್ದ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಹಿನ್ನಲೆಯಲ್ಲಿ ರೋಹಿತ್‌ ಜೊತೆ ರಾಹುಲ್‌ ಬದಲು ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟೀಮ್‌ ಇಂಡಿಯಾ ನಾಯಕ, ವಿಶ್ವಕಪ್‌ ಟೂರ್ನಿಯಲ್ಲಿ ಕೆ.ಎಲ್‌.ರಾಹುಲ್, ತಮ್ಮೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಅದಾಗಿಯೂ, ಕೆಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರೂ ಆರಂಭಿಕ ಆಟಗಾರನ ಜವಾಬ್ದಾರಿ ನಿಭಾಯಿಸುವರು ಎಂಬ ಸೂಚನೆ ಕೊಟ್ಟಿದ್ದಾರೆ.

ವಿಕೆಟ್‌ ಕೀಪಿಂಗ್‌ ಸ್ಥಾನಕ್ಕೆ ಪಂತ್‌-ಕಾರ್ತಿಕ್‌ ಪೈಪೋಟಿ

ಮಹತ್ವದ ಟಿ20 ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ವಿಕೆಟ್‌ ಕೀಪರ್‌ ಸ್ಥಾನಕ್ಕೆ ತೀವ್ರ ಗೊಂದಲ ಏರ್ಪಟ್ಟಿದೆ. ರಿಷಭ್‌ ಪಂತ್‌ ಮತ್ತು ಅನುಭವಿ ದಿನೇಶ್‌ ಕಾರ್ತಿಕ್‌ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಆಯ್ಕೆ ಸಮಿತಿಯದ್ದಾಗಿದೆ. ಹೀಗಾಗಿ ಆಸ್ಟ್ರEಲಿಯಾ ಮತ್ತು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯು ಉಭಯ ಆಟಗಾರರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಆಸೀಸ್‌ ತಂಡದಲ್ಲಿ ಹಿರಿಯರಿಗೆ ವಿಶ್ರಾಂತಿ

ತಮ್ಮದೇ ನೆಲದಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತಕ್ಕೆ ಬಂದಿಳಿದಿರುವ ಹಾಲಿ ಚಾಂಪಿಯನ್‌ ಆಸೀಸ್‌ ತಂಡ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದು ವಿಶೇಷ. ಆರೋನ್‌ ಫಿಂಚ್‌ ನೇತೃತ್ವದ ಆಸ್ಟ್ರೇಲಿಯಾ ಪಾಳಯದಿಂದ ಡೇವಿಡ್‌ ವಾರ್ನರ್‌, ಮಿಚೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮಿಚೆಲ್‌ ಮಾರ್ಷ್‌ ಹೊರಗುಳಿದಿದ್ದಾರೆ.

IND vs AUS ಸಂಭವನೀಯ ತಂಡ

ಭಾರತ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್

ಆಸ್ಟ್ರೇಲಿಯಾ XI: ಆರನ್ ಫಿಂಚ್, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಡೇನಿಯಲ್ ಸ್ಯಾಮ್ಸ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ, ಕೇನ್ ರಿಚರ್ಡ್‌ಸನ್

Join Whatsapp