ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ| ಶಹಭಾಝ್‌ ಅಹ್ಮದ್‌, ಶ್ರೇಯಸ್‌ ಅಯ್ಯರ್‌ಗೆ ಸ್ಥಾನ

Prasthutha|

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಮ್‌ ಇಂಡಿಯಾ, ಬುಧವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ತಂಡವನ್ನು ಎದುರಿಸಲಿದೆ.

- Advertisement -

3 ಪಂದ್ಯಗಳ ಸರಣಿಯ ಮೊದಲ ಪಂದ್ಯ ತಿರುವನಂತಪುರಂನಲ್ಲಿ ಸೆಪ್ಟಂಬರ್‌ 28ರಂದು ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಕೇರಳದ ರಾಜಧಾನಿಗೆ ಆಗಮಿಸಿದ್ದು, ಅಭ್ಯಾಸದಲ್ಲಿ ತೊಡಗಿವೆ. ಈ ನಡುವೆ ಸರಣಿಗಾಗಿ ಪ್ರಕಟಿಸಲಾಗಿದ್ದ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ಪ್ರಮುಖ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಾರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಆರ್‌ಸಿಬಿ ಆಟಗಾರ ಶಹಭಾಝ್‌ ಅಹ್ಮದ್‌ಗೆ ಅವಕಾಶ ನೀಡಲಾಗಿದೆ. ಮುಂಬರುವ ವಿಶ್ವಕಪ್‌ ಟೂರ್ನಿಗಾಗಿ ಪಾಂಡ್ಯ, ಮತ್ತು ಭುವನೇಶ್ವರ್‌ ಕುಮಾರ್‌ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದು, ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೊಂದೆಡೆ ಬೆನ್ನು ನೋವಿನಿಂದ ಬಳಲುತ್ತಿರುವ ದೀಪಕ್‌ ಹೂಡ, ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕೋವಿಡ್‌ನಿಂದ ಚೇತರಿಸಿಕೊಳ್ಳದ ಮುಹಮ್ಮದ್‌ ಶಮಿ, ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.  ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಜಸ್‌ಪ್ರೀತ್‌ ಬುಮ್ರಾ ಮತ್ತು ಹರ್ಷಲ್‌ ಪಟೇಲ್‌ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಡೆತ್‌ ಬೌಲಿಂಗ್‌ನ ದೌರ್ಬಲ್ಯದ ಕುರಿತು ಆತಂಕ ವ್ಯಕ್ತಪಡಿಸಿರುವ ನಾಯಕ ರೋಹಿತ್‌ ಶರ್ಮಾ, ಹರಿಣಗಳ ವಿರುದ್ಧ ಯಾವ ರೀತಿಯಲ್ಲಿ ಬೌಲಿಂಗ್‌ ವಿಭಾಗವನ್ನು ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

- Advertisement -

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದ್ದು, ಇದಕ್ಕು ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಭಾರತಕ್ಕೆ ಕೊನೆಯ ʻಅಭ್ಯಾಸʼವಾಗಿರಲಿದೆ. ಆದರೆ ತಂಡದ ಮಧ್ಯಮ ಕ್ರಮಾಂಕದಲ್ಲಿನ ಗೊಂದಲ ಮತ್ತು ಪ್ರಮುಖ ಬೌಲರ್‌ಗಳ ನೀರಸ ಪ್ರದರ್ಶನ  ಟೀಮ್‌ ಇಂಡಿಯಾ ಪಾಳಯದಲ್ಲಿ ಆತಂಕ ಉಂಟುಮಾಡಿದೆ.



Join Whatsapp