ಒಮಾನ್; ಪಪುವಾ ನ್ಯೂಗಿನಿ ತಂಡದ ವಿರುದ್ಧ 84 ರನ್’ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ ಬಾಂಗ್ಲಾದೇಶ ತಂಡ, ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ‘ಸೂಪರ್-12’ ಹಂತಕ್ಕೆ ಪ್ರವೇಶ ಪಡೆದಿದೆ.
‘ಬಿ’ ಗುಂಪಿನಲ್ಲಿ ಗುರುವಾರ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, ನಾಯಕ ಮೆಹಮುದುಲ್ಲಾರ ಬಿರುಸಿನ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ಬಾಂಗ್ಲಾ ಪರ ನಾಯಕನ ಆಟವಾಡಿದ ಮೆಹಮುದುಲ್ಲಾ, ಕೇವಲ 27 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಅನುಭವಿ ಶಕೀಬ್ ಅಲ್ ಹಸನ್ 46 ಹಾಗೂ ಲಿಟನ್ ದಾಸ್ 29 ರನ್‌ಗಳಿಸಿದರು.
ಬೃಹತ್ ಗುರಿ ಬೆನ್ನತ್ತಿದ ಪಪುವಾ ನ್ಯೂಗಿನಿ, 19.3 ಓವರ್‌ಗಳಲ್ಲಿ 97 ರನ್‌ಗಳಿಗೆ ಅಲೌಟ್ ಆಯಿತು. 29 ರನ್ ಗಳಿಸುವಷ್ಟರಲ್ಲೇ ಪಪುವಾ ನ್ಯೂಗಿನಿ ತಂಡ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ವಿಕೆಟ್ ಕೀಪರ್ ಕಿಪ್ಲಿನ್ ಡೊರಿಗಾ ಅಜೇಯ 46 ರನ್ ಗಳಿಸಿ ತಂಡಕ್ಕೆ ಕೊಂಚ ಆಸರೆಯಾದರು.
ಈ ಮೂಲಕ ಸತತ ಮೂರನೇ ಪಂದ್ಯದಲ್ಲೂ ಸೋತ ಪಪುವಾ ನ್ಯೂಗಿನಿ ತಂಡ ತಮ್ಮ ಚೊಚ್ಚಲ ವಿಶ್ವಕಪ್ ಅಭಿಯಾನವನ್ನು ಗೆಲುವು ಕಾಣದೇ ಕೊನೆಗೊಳಿಸಿತು.
ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಬಾಂಗ್ಲಾದೇಶ ಒತ್ತಡಕ್ಕೆ ಸಿಲುಕಿತ್ತು. ಆದರೆ
ನಂತರದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸುಲಭ ಜಯದೊಂದಿಗೆ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟ ಶ್ರೀಲಂಕಾ
‘ಎ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 70 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಶ್ರೀಲಂಕಾ ಸೂಪರ್-12 ಹಂತಕ್ಕೆ ಲಗ್ಗೆಯಿಟ್ಟಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಸ್ಸಾಂಕ ಹಾಗೂ ಹಸರಂಗರ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 171 ರನ್’ಗಳಿಸಿತ್ತು.
ಕೇವಲ 8 ರನ್ ಗಳಿಸುವಷ್ಟರಲ್ಲೇ ಲಂಕಾ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಕುಸಲ್ ಪೆರೇರಾ ಮತ್ತು ಆವಿಷ್ಕಾ ಫರ್ನಾಂಡೊ ಸೊನ್ನೆ ಸುತ್ತಿದರೆ, ಚಂಡಿಮಲ್ 6 ರನ್’ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಪಥುಮ್ ನಿಸಂಕಾ ಮತ್ತು ವನಿಂದು ಹಸರಂಗ ಎಚ್ಚರಿಕೆಯಿಂದ ಭರ್ಜರಿ ಆಟ ಪ್ರದರ್ಶಿಸಿದರು.
ಇನ್ನು ರನ್ ಚೇಸಿಂಗ್ ವೇಳೆ ಗೆಲ್ಲಲು 171 ರನ್ ಗುರಿ ಪಡೆದಿದ್ದ ಐರ್ಲೆಂಡ್ ತಂಡದ ಇನ್ನಿಂಗ್ಸ್ 101 ರನ್ಗಳಿಸುವಷ್ಟರಲ್ಲೇ ಕೊನೆಗೊಂಡಿತು.
ನಾಯಕ ಬಾಲ್’ಬಿರ್ನಿ 41 ರನ್’ಗಳಿಸಿ ಹೋರಾಟ ನಡೆಸಿದರೂ ಉಳಿದ ಬ್ಯಾಟರ್ಸ್ ಸಾಥ್ ನೀಡಲಿಲ್ಲ. 8 ಮಂದಿ ಬ್ಯಾಟರ್ಸ್ ಎರಡಂಕೆಯನ್ನೂ ದಾಟದೇ ಪೆವಿಲಿಯನ್ ಸೇರಿಕೊಂಡರು.
ಈ ಗೆಲುವಿನ ಮೂಲಕ ಆಡಿದ ಎರಡು ಪಂದ್ಯಗಳಲ್ಲೂ ಗೆಲುವು ದಾಖಲಿಸಿದ ಶ್ರೀಲಂಕಾ ತಂಡ “ಸೂಪರ್-12” ಹಂತಕ್ಕೆ ತಲುಪಿದೆ