ಒಂದೇ ರೂಮಿನಲ್ಲಿ ಇಬ್ಬರು ಯುವಕರ ಅನುಮಾನಾಸ್ಪದ ಸಾವು

Prasthutha|

ಹಾಸನ: ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ.

- Advertisement -


ಉತ್ತರಪ್ರದೇಶದ ನಯನ್ಪುರ ಗ್ರಾಮದ ರಾಮ್ ಸಂಜೀವನ್ ಹಾಗೂ ನವಾಬ್ (24) ಮೃತರು.


ಇವರಿಬ್ಬರು ಕಳೆದ ಹದಿನೈದು ದಿನದ ಹಿಂದೆ ಕೆಲಸ ಕೊಡಿಸುವಂತೆ ಹಾಸನದಲ್ಲಿರುವ ತನ್ನ ಸ್ನೇಹಿತನಾದ ವಿಕ್ರಂ ಎಂಬಾತನನ್ನು ಸಂಪರ್ಕಿಸಿದ್ದರು. ಈ ವೇಳೆ ವಿಕ್ರಂ ಇಬ್ಬರಿಗೂ ಕೆಲಸ ಕೊಡಿಸುವುದಾಗಿ ಹಾಸನಕ್ಕೆ ಕರೆಸಿಕೊಂಡಿದ್ದ. ವಾರದ ಹಿಂದೆ ಹಾಸನಕ್ಕೆ ಬಂದಿದ್ದ ರಾಮ್ ಸಂಜೀವನ್ ಹಾಗೂ ನವಾಬ್ ಹನುಮಂತಪುರದಲ್ಲಿ ಬಾಡಿಗೆ ರೂಂ ಪಡೆದು ನಗರದ ಹೊರವಲಯದ ಖಾಸಗಿ ಕಂಪನಿಯಲ್ಲಿ ಎರಡು ದಿನ ಕೆಲಸ ಮಾಡಿದ್ದರು.

- Advertisement -


ಬಳಿಕ ಇಬ್ಬರಿಗೂ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲಸಕ್ಕೆ ರಜೆ ಹಾಕಿ ಗುರುವಾರ ಇಬ್ಬರೂ ಖಾಸಗಿ ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದು ರಾತ್ರಿ ಊಟ ಮಾಡಿ ಮಲಗಿದ್ದರು. ಶುಕ್ರವಾರ ಇಡೀ ದಿನ ರೂಂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮನೆ ಮಾಲೀಕರು ರೂಂ ಬಾಗಿಲು ಒಡೆದು ನೋಡಿದಾಗ ಮಲಗಿದ್ದಲ್ಲಿಯೇ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ.