ಸುರತ್ಕಲ್ ಟೋಲ್ ರದ್ದು ಮಾಡದೆ, ವಿಲೀನ ಮಾಡಿ ಸುಂಕ ಹೆಚ್ಚಿಸಿರುವುದು ಖಂಡನೀಯ: ಯು.ಬಸವರಾಜ

Prasthutha|

ಮಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸಲು ರಾಜ್ಯದ ಮತದಾರರಿಗೆ ಕರ್ನಾಟಕ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಕರೆ ನೀಡಿದ್ದಾರೆ.

- Advertisement -

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸುವುದು, ಎನ್’ಐಟಿಕೆ ಟೋಲ್ ಹೊರೆ ಮತ್ತು ಕುಕ್ಕರ್ ಬಾಂಬ್ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಿಪಿಎಂ ನಿರ್ಣಯ ಕೈಗೊಂಡಿದೆ. ಬಿಜೆಪಿಗೆ ಕನ್ನಡಿಗರು ಬಹುಮತ ನೀಡಿಲ್ಲ. ಆಪರೇಷನ್ ಕಮಲ ನಡೆಸಿ ರಾಜ್ಯಪಾಲರ ಮತ್ತು ಕೇಂದ್ರ ಸರಕಾರವನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ. ಕಾರ್ಪೊರೇಟ್ ಕಂಪನಿಗಳಿಗೆ ರೈತರ ಭೂಮಿ, 40% ಕಮಿಷನ್, ಗ್ರಾಹಕರ ಲೂಟಿ, ಹೊಸ ಶಿಕ್ಷಣ ನೀತಿಯ ಮೂಲಕ ಬಡವರು ಮತ್ತು ದಲಿತರನ್ನು ಶಿಕ್ಷಣದಿಂದ ವಂಚಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀಸಲಾತಿಯ ದುರುಪಯೋಗ ಮಾಡುತ್ತಿವೆ. ಕೋಮು ಗಲಭೆಯಲ್ಲಿ ಸಾಯುವ ಹಿಂದೂ ಮತ್ತು ಮುಸ್ಲಿಂ ನಡುವೆ ತಾರತಮ್ಯ ಮಾಡುವ ಈ ಬಿಜೆಪಿ ಸರಕಾರವನ್ನು ನಿರ್ಣಾಯಕವಾಗಿ ಸೋಲಿಸಬೇಕು ಎಂದು ಬಸವರಾಜ ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿ ಅದರಲ್ಲಿ ಗೆದ್ದಿದ್ದಾರೆ. ಸಿಪಿಎಂ ಈ ಹೋರಾಟದಲ್ಲಿ ನಿರ್ಣಾಯಕ ಹೋರಾಟ ಮಾಡಿದೆ. ಆದರೆ ಟೋಲ್ ರದ್ದು ಮಾಡದೆ, ವಿಲೀನ ಮಾಡಿ ಸುಂಕ ಹೆಚ್ಚಿಸಿರುವುದನ್ನು ಸಿಪಿಎಂ ಖಂಡಿಸುತ್ತದೆ. ಉದ್ಯಮಗಳ ಹೂಡಿಕೆಗೆ 30% ಎಂದು ಕೊಡುವ ಸರಕಾರ ಟೋಲ್ ತಗ್ಗಿಸಬೇಕು. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಅಕ್ರಮ ಟೋಲ್ ಗೇಟ್’ಗಳು ಅವನ್ನು ಮೊದಲು ಮುಚ್ಚಲಿ ಎಂದು ಬಸವರಾಜ ಒತ್ತಾಯಿಸಿದರು.

- Advertisement -

ಕುಕ್ಕರ್ ಬಾಂಬು ಸ್ಫೋಟದ ಸ್ಪಷ್ಟ ಮಾಹಿತಿಯನ್ನು ಸರಕಾರ ನೀಡಬೇಕು. ಆ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಬಿಜೆಪಿ ಸರಕಾರದ ತನಿಖೆ ಸಂದೇಹಾಸ್ಪದ. ಅದು ಆಗಬಾರದು ಎಂದು ಅವರು ಹೇಳಿದರು.
ಪಕ್ಷದ ಮುಖಂಡ ಯಾದವ ಶೆಟ್ಟಿ ಮಾತನಾಡಿ ,ಹೋರಾಟ ಮಾಡಿದವರು ನಾವು. ಗೆಲುವು ನಮ್ಮದೆಂದು ಹಲವರು ಹೇಳಿಕೊಳ್ಳುತ್ತಾರೆ. ಹೆಚ್ಚುವರಿ ಟೋಲ್ ವಸೂಲಿ ಮುಂದುವರಿದರೆ ಇನ್ನೂ ಹೋರಾಟ ಮುಂದುವರಿಯುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾಧ್ಯಕ್ಷ ಕೆ. ಯಾದವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ ಮೊದಲಾದವರು ಉಪಸ್ಥಿತರಿದ್ದರು.

Join Whatsapp