ಮಂಗಳೂರು: ಸುರತ್ಕಲ್ ಕೃಷ್ಣಾಪುರ ನಿವಾಸಿ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಶಕ್ಕೆ ಪಡೆದವರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ, ಅವರ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ಐವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃಷ್ಣಾಪುರ ಐದನೇ ಬ್ಲಾಕ್’ನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಜಲೀಲ್ ಅವರನ್ನು ನಿನ್ನೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ಬಳಿಕ ದ್ವಿಚಕ್ರ ವಾಹನದಲ್ಲಿ ಅವರು ಪರಾರಿಯಾಗಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ವಿಶೇಷ ತಂಡದ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಪುರುಷರ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಓರ್ವ ಮಾಸ್ಕ್ ಧರಿಸಿದ್ದರೆ, ಮತ್ತೋರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಹತ್ಯೆಗೆ ಬಳಸಿದ ಚಾಕು ಸ್ಥಳದಲ್ಲೇ ದೊರೆತಿದ್ದು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ವಶಕ್ಕೆ ಪಡೆದವರ ಬೆರಳಚ್ಚು ಅವುಗಳಿಗೆ ಸರಿ ಹೊಂದುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.