ಮಂಗಳೂರು: ನಗರದ ಸುರತ್ಕಲ್, ಎನ್ ಐಟಿಕೆ ಬಳಿಯ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಧರಣಿಯು 5ನೇ ದಿನವನ್ನು ಪೂರೈಸಿದೆ.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಸಮಿತಿ ಮುಂದಾಳತ್ವದಲ್ಲಿ ನೂರಾರು ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಯುತ್ತಿದೆ. ಧರಣಿಗೆ ಕಾಂಗ್ರೆಸ್, ಜೆಡಿಎಸ್, ಡಿವೈ ಎಫ್ ಐ , ದಸಂಸ, ಟ್ಯಾಕ್ಸಿ, ಕ್ಯಾಬ್ ಅಶೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಮಂಗಳವಾರ ಧರಣಿ ಸ್ಥಳದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಕವಿಗೋಷ್ಠಿ, ಮೇಘನಾ ಕುಂದಾಪುರ ಇವರಿಂದ ಗಾಯನ ಕಾರ್ಯಕ್ರಮ, ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆದಿದ್ದು, ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಧ್ವಜ ಅವರೋಹಣ ನಡೆಯಿತು.
ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಮಾಜಿ ಶಾಸಕ ಕೆ ಅಭಯಚಂದ್ರ ಜೈನ್, ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ, ಡಿವೈ ಎಫ್ ಐ ನ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್, ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗಡೆ, ಹಮ್ಮಬ್ಬ ಕಾಟಿಪಳ್ಳ, ಹಸನಬ್ಬ ಮಂಗಲಪೇಟೆ, ಧರ್ಮಾನಂದ ಶೆಟ್ಟಿಗಾರ್, ಬಜ್ಪೆ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲೆ ಮುಹಮ್ಮದ್, ದಯಾನಂದ ಶೆಟ್ಟಿ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.