ಮೇಲ್ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

Prasthutha|

►ಐವರು ನ್ಯಾಯಮೂರ್ತಿಗಳಲ್ಲಿ ಮೂವರು ಪರವಾಗಿ, ಇಬ್ಬರು ವಿರುದ್ಧವಾಗಿ ತೀರ್ಪು

- Advertisement -


ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಇಡಬ್ಲ್ಯುಎಸ್ ಮೀಸಲಾತಿ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯರ ಪೀಠ ಎತ್ತಿ ಹಿಡಿದಿದೆ.
ಆದರೆ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರು ಮೀಸಲಾತಿಯ ವಿರುದ್ಧ ತೀರ್ಪು ನೀಡಿದ್ದಾರೆ.


ಪೀಠದಲ್ಲಿದ್ದ ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಪರ್ದಿವಾಲಾ ಮೀಸಲಾತಿ ಪರವಾಗಿ ತೀರ್ಪು ನೀಡಿದರೆ, ನ್ಯಾಯಮೂರ್ತಿ ರವೀಂದ್ರ ಭಟ್ , ಸಿಜೆಐ ಯುಯು ಲಲಿತ್ ಅವರು ಮೀಸಲಾತಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ.
ನ್ಯಾ. ರವೀಂದ್ರ ಭಟ್ ಅವರು ಬಹುಮತದ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿ ಭಿನ್ನ ತೀರ್ಪು ನೀಡಿದ್ದಾರೆ.

- Advertisement -


ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು, ಆರ್ಥಿಕ ಆಧಾರದ ಮೇಲೆ ಮೀಸಲಾತಿ ಒದಗಿಸುವುದರಿಂದ ಮೂಲಭೂತ ರಚನೆ ಅಥವಾ ಭಾರತ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದು ತೀರ್ಪು ನೀಡಿದರು.
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬೇಲಾ ತ್ರಿವೇದಿ ಅವರ ತೀರ್ಪುಗಳಿಗೆ ನನ್ನ ಸಹಮತವಿದೆ. ಇಡಬ್ಲ್ಯೂಎಸ್ ತಿದ್ದುಪಡಿಯನ್ನು ನಾನು ಎತ್ತಿಹಿಡಿಯುವೆ ಎಂದು ತೀರ್ಪಿನಲ್ಲಿ ತಿಳಿಸಿದರು.


ನ್ಯಾಯಮೂರ್ತಿಗಳು ಐದು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದು, ಸಿಜೆಐ ಯು ಯು ಲಲಿತ್‌ ಮತ್ತು  ರವೀಂದ್ರ ಭಟ್  ತಿದ್ದುಪಡಿಗೆ ಅಸಮ್ಮತಿ ಸೂಚಿಸಿ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ.

ಇಡಬ್ಲ್ಯೂಎಸ್ ಮೀಸಲಾತಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನುಡಿದರು. “ಇಡಬ್ಲ್ಯೂಎಸ್‌ ತಿದ್ದುಪಡಿ  ಮೂಲಭೂತ ರಚನೆಯನ್ನು ಉಲ್ಲಂಘಿಸುವುದಿಲ್ಲ ಏಕೆಂದರೆ ಅದು ಆರ್ಥಿಕ ಮಾನದಂಡಗಳನ್ನು ಆಧರಿಸಿದೆ, ಇಡಬ್ಲ್ಯೂಎಸ್‌ ಕೋಟಾಕ್ಕೆ ವಿಶೇಷ ನಿಬಂಧನೆಯನ್ನು ರೂಪಿಸಿರುವ ಸರ್ಕಾರ ಮೂಲಭೂತ ರಚನೆಯನ್ನು ಉಲ್ಲಂಘಿಸಿಲ್ಲ” ಎಂದರು.

ಸಮಾನ ಸಮಾಜದ ಗುರಿಯತ್ತ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಮೀಸಲಾತಿ ಸಕಾರಾತ್ಮಕ ಕ್ರಮದ ಸಾಧನವಾಗಿದೆ ಎಂದು ಅವರು ಹೇಳಿದರು. “ಇದು ಹಿಂದುಳಿದ ಯಾವುದೇ ವರ್ಗ ಅಥವಾ ಪಂಗಡವನ್ನು ಸೇರಿಸುವ ಸಾಧನವಾಗಿದೆ. ಆರ್ಥಿಕ ಆಧಾರದ ಮೇಲೆ ಮೀಸಲಾತಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ” ಎಂದು ತಿಳಿಸಿದರು.

ಪರವಾದ ಮತ್ತೊಂದು ತೀರ್ಪು ನೀಡಿದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ನ್ಯಾ. ದಿನೇಶ್‌ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹೊರತುಪಡಿಸಿ ಇತರರಿಗೆ ವಿಶೇಷ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುವ ತಿದ್ದುಪಡಿಯನ್ನು ಸಂಸತ್ತಿನ ಸಮಂಜಸ ಕ್ರಮವೆಂದು ಪರಿಗಣಿಸಬೇಕು ಎಂದು ಅವರು ತೀರ್ಪು ನೀಡಿದರು.

“…ತಿದ್ದುಪಡಿ ಸಮಂಜಸವಾದ ವರ್ಗೀಕರಣ ಮಾಡಿದೆ. ಶಾಸಕಾಂಗವು ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಮೀಸಲಾತಿಯಿಂದ ಜನರನ್ನು ಆರ್ಥಿಕವಾಗಿ ಹೊರಗಿಟ್ಟಿರುವ ಬಗ್ಗೆ ಅದಕ್ಕೆ ತಿಳಿದಿದೆ” ಎಂದು ನ್ಯಾ. ಬೇಲಾ ವಿವರಿಸಿದರು. ಜೊತೆಗೆ ಮೀಸಲಾತಿಯ ಪರಿಕಲ್ಪನೆಯನ್ನು ಮರುಪರಿಶೀಲಿಸುವಂತೆಯೂ ಅವರು ಸಲಹೆ ನೀಡಿದರು.

“ಭಾರತದಲ್ಲಿ ಹಳೆಯ ಜಾತಿ ವ್ಯವಸ್ಥೆಯಿಂದಾಗಿ ಮೀಸಲಾತಿ ಜಾರಿಗೆ ಬಂತು. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಮಾನ ವೇದಿಕೆ ದೊರೆಯಲು ಕಾರಣವಾಯಿತು ಎಂಬುದನ್ನು ನಿರಾಕರಿಸಲಾಗದು. (ಸ್ವಾತಂತ್ರ್ಯ ದೊರೆತು) 75 ವರ್ಷಗಳಾಗಿರುವ ಹೊತ್ತಿನಲ್ಲಿ  ಪರಿವರ್ತನಾಶೀಲ ಸಾಂವಿಧಾನಿಕತೆಯ ಹುರುಪಿನಲ್ಲಿ ಮೀಸಲಾತಿ ಕುರಿತು ಮರುಪರಿಶೀಲಿಸಬೇಕಾಗಿದೆ” ಎಂದು ಅವರು ತೀರ್ಪು ನೀಡಿದರು.

ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿದ ನ್ಯಾ. ಜೆ ಬಿ ಪರ್ದಿವಾಲಾ ಅವರು ಅನಿರ್ದಿಷ್ಟ ಕಾಲದವರೆಗೆ ಮೀಸಲಾತಿ ಮುಂದುವರೆಸುವುದಕ್ಕೆ ಅಂತ್ಯ ಹಾಡಬೇಕು ಎಂದು ಪ್ರತಿಪಾದಿಸಿದರು.  

 “ಮುಂದುವರೆದಿರುವ ವರ್ಗಗಳನ್ನು ಹಿಂದುಳಿದ ವರ್ಗಗಳಿಂದ ತೆಗೆದುಹಾಕಬೇಕು. ಇದರಿಂದ ಅಗತ್ಯ ಇರುವವರಿಗೆ ನೆರವು ದೊರೆಯುತ್ತದೆ. ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಮಾರ್ಗಗಳನ್ನು ಇಂದಿನ ಕಾಲಕ್ಕೆ ಪ್ರಸಕ್ತವಾಗುವಂತೆ ಮರುಪರಿಶೀಲಿಸುವ ಅಗತ್ಯವಿದೆ. ಮಿಸಲಾತಿ ಎಂಬುದು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯಬಾರದು. ಅದು ಪಟ್ಟಭದ್ರ ಹಿತಾಸಕ್ತಿಯಾಗುತ್ತದೆ” ಎಂದು ಅವರು ಹೇಳಿದರು.

ಆದರೆ ಭಿನ್ನ ತೀರ್ಪು ನೀಡಿದ ನ್ಯಾ. ರವೀಂದ್ರ ಭಟ್‌ ಅವರು ತಿದ್ದುಪಡಿಯು “ಸಾಮಾಜಿಕ ಮತ್ತು ಹಿಂದುಳಿದ ವರ್ಗದ ಸವಲತ್ತು ಪಡೆದವರು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ನಂಬುವಂತಹ ಭ್ರಮೆ ಹುಟ್ಟಿಸುತ್ತದೆ. 16 (1) ಮತ್ತು (4) ಒಂದೇ ಸಮಾನತೆಯ ತತ್ವದ ಅಂಶಗಳಾಗಿವೆ ಎಂದು ಈ ನ್ಯಾಯಾಲಯ  ಅಭಿಪ್ರಾಯಪಟ್ಟಿದೆ” ಎಂದರು.

“ಎರಡು ಸವಲತ್ತುಗಳನ್ನು ನೀಡುವ ಈ ತಿದ್ದುಪಡಿಯು ತಪ್ಪಾಗಿದೆ. ತರತಮ ರಹಿತ ಮತ್ತು ಹೊರಗಿಡುವಿಕೆಗೆ ವಿರುದ್ಧವಾದ ಸಮಾನತೆಯ ಸಂಹಿತೆಯ ಅಂಶವನ್ನು ಇದು ಉಲ್ಲಂಘಿಸುತ್ತದೆ” ಎಂದು ವಿವರಿಸಿದರು.

ಇಡಬ್ಲ್ಯೂಎಸ್‌ನಿಂದ ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಹೊರಗಿಡುವುದನ್ನು ಇದು ಅವರ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

“ಆರ್ಥಿಕ ದುರ್ಬಲತೆ, ಆರ್ಥಿಕ ಹಿಂದುಳಿದಿರುವಿಕೆ ಈ ತಿದ್ದುಪಡಿಯ ಬೆನ್ನೆಲುಬಾಗಿದ್ದು ಈ   ತಿದ್ದುಪಡಿಯು ಸಾಂವಿಧಾನಿಕವಾಗಿ ಅಸಮರ್ಥನೀಯವಾಗಿದೆ.  ಎಸ್‌ಸಿ / ಎಸ್‌ಟಿ, ಒಬಿಸಿಯಂತಹ ವರ್ಗಗಳನ್ನು ಹೊರಗಿಡುವುದಕ್ಕೆ ಸಾಂವಿಧಾನಿಕವಾಗಿ ಅನುಮತಿ ನೀಡಲಾಗದು” ಎಂದರು.

ನ್ಯಾ. ಭಟ್ ಅವರ ಅಭಿಪ್ರಾಯಕ್ಕೆ ಸಿಜೆಐ ಯು ಯು ಲಲಿತ್ ಸಹಮತ ವ್ಯಕ್ತಪಡಿಸಿದರು.

ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಸೇರಿದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ. 27ರಂದು ಮುಕ್ತಾಯಗೊಳಿಸಿತ್ತು.ಙ

ಮೀಸಲಾತಿಗೆ ಆರ್ಥಿಕ ವರ್ಗೀಕರಣ ಏಕೈಕ ಆಧಾರವಾಗಿರಬಾರದು ಎಂಬ ಕಾರಣಕ್ಕಾಗಿ ತಿದ್ದುಪಡಿ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಗಳಾದ ಜನಹಿತ್ ಅಭಿಯಾನ್‌ ಮತ್ತು ಯೂತ್ ಫಾರ್ ಈಕ್ವಾಲಿಟಿ ಅರ್ಜಿ ಸಲ್ಲಿಸಿದ್ದವು. ತಿದ್ದುಪಡಿ  ಸಂವಿಧಾನದ ಮೂಲ ರಚನೆಯನ್ನು ಮತ್ತು ಇಂದ್ರ ಸಾಹ್ನಿ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಒದಗಿಸಲಾಗಿದ್ದ ಒಟ್ಟಾರೆ 50% ಮೀಸಲಾತಿ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರ ಸಂಸ್ಥೆಗಳು ವಿಚಾರಣೆ ವೇಳೆ ವಾದಿಸಿದ್ದವು.

ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಮತ್ತು ಇಂದ್ರ ಸಾಹ್ನಿ ಪ್ರಕರಣದಲ್ಲಿ ನೀಡಲಾದ ಆದೇಶದ ಪ್ರಕಾರ ಒಟ್ಟಾರೆ 50% ಮೀಸಲಾತಿಯನ್ನು ಉಲ್ಲಂಘಿಸುತ್ತದೆ ಎಂದು ವಿಚಾರಣೆಯ ಸಂದರ್ಭದಲ್ಲಿ, ಅವು ತಿಳಿಸಿದ್ದವು. ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಹೊರತಾದ ಇಡಬ್ಲ್ಯೂಎಸ್‌ ವರ್ಗಕ್ಕಾಗಿನ ಈ ಮೀಸಲಾತಿ ಮನಸೋ ಇಚ್ಛೆ ಮತ್ತು ಅತಿರೇಕದಿಂದ ಕೂಡಿದೆ ಎಂದು ಸಂಸ್ಥೆಗಳು ಹೇಳಿದ್ದವು.

(ಕೃಪೆ: ಬಾರ್ & ಬೆಂಚ್)

Join Whatsapp