ಯತಿ ನರಸಿಂಗಾನಂದ, ತ್ಯಾಗಿ ಬಂಧನದ ಕೋರಿಕೆ; ‘ಮೊಹಮ್ಮದ್’ ಪುಸ್ತಕ ನಿಷೇಧಿಸಲು ಮನವಿ: ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ

Prasthutha|

ನವದೆಹಲಿ: ಮುಸಲ್ಮಾನರ ವಿರುದ್ಧ ಹಿಂಸೆಗೆ ನಿರಂತರ ಪ್ರಚೋದನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಯತಿ ನರಸಿಂಗಾನಂದ ಹಾಗೂ ಜಿತೇಂದ್ರ ತ್ಯಾಗಿ (ಪೂರ್ವನಾಮ ವಸೀಂ ರಿಜ್ವಿ) ಅವರನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿತು [ಇಂಡಿಯನ್‌ ಮುಸ್ಲಿಂ ಶಿಯಾ ಇಸ್ನಾ ಅಶಾರಿ ಜಮಾತ್‌ ವರ್ಸಸ್‌ ಭಾರತ ಒಕ್ಕೂಟ ಮತ್ತಿತರರು].

- Advertisement -

ಭಾರತೀಯ ಮುಸ್ಲಿಂ ಶಿಯಾ ಇಸ್ನಾ ಅಶಾರಿ ಜಮಾತ್‌ ಸಂಘಟನೆಯು ಕಮರ್‌ ಹಸ್ನಾನಿ ಮುಖೇನ ಪಿಐಎಲ್‌ ಸಲ್ಲಿಸಿತ್ತು. ಇಸ್ಲಾಂ ವಿರುದ್ಧವಾಗಲಿ, ಪ್ರವಾದಿ ಮುಹಮ್ಮದ್‌ ಹಾಗೂ ಇಸ್ಲಾಂನ ಮಹಾಪುರುಷರ ವಿರುದ್ಧವಾಗಲಿ ನಿಂದನಾತ್ಮಕವಾದ, ಕೀಳಾದ, ದ್ವೇಷಪೂರಿತ ಟೀಕೆಗಳನ್ನು ಯತಿ ನರಸಿಂಗಾನಂದ ಮತ್ತು ತ್ಯಾಗಿ ಅವರು ಮಾಡದಂತೆ ನಿರ್ಬಂಧಿಸಬೇಕು. ಅಲ್ಲದೆ, ತ್ಯಾಗಿ ಅವರು ಬರೆದಿರುವ ‘ಮೊಹಮ್ಮದ್‌’ ಪುಸ್ತಕವನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಅರ್ಜಿದಾರರ ಕೋರಿಕೆಯನ್ನು ಮನ್ನಿಸದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್ ಲಲಿತ್‌ ಮತ್ತು ನ್ಯಾ. ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠವು ಈ ರೀತಿಯ ಮನವಿಗಳನ್ನು ಸಂವಿಧಾನದ 32ನೇ ವಿಧಿಯಡಿ ಪುರಸ್ಕರಿಸಲಾಗದು ಎಂದಿತು.

- Advertisement -

“ನೀವು 32ನೇ ವಿಧಿಯಡಿ ಬಂಧಿಸಲು ಮತ್ತು ಕ್ರಿಮಿನಲ್‌ ವಿಚಾರಣೆ ನಡೆಸಲು ಕೋರುತ್ತಿದ್ದೀರಾ? ಒಂದು ವೇಳೆ ನಾವು ಹಾಗೆ ಮುಂದುವರೆದಲ್ಲಿ, ಲಲಿತಾ ಕುಮಾರಿ ಪ್ರಕರಣದಲ್ಲಿ ನೀಡಲಾದ ತೀರ್ಪು ಏನಾಗಲಿದೆ? ನೀವು ದೂರು ದಾಖಲಿಸಿದ್ದೀರಾ?” ಎಂದು ಪೀಠವು ಅರ್ಜಿದಾರರನ್ನು ಪ್ರಶ್ನಿಸಿತು.

ಆಗ ಅರ್ಜಿದಾರರ ಪರ ವಕೀಲರು ತಾವು ಮನವಿಯಿಂದ ಬಂಧನದ ಕೋರಿಕೆಯನ್ನು ಕೈಬಿಡುವುದಾಗಿ ತಿಳಿಸಿ, ಇತರೆ ಕೋರಿಕೆಗಳನ್ನು ಪುರಸ್ಕರಿಸಿ ನ್ಯಾಯಾಲಯವು ಮನವಿ ಆಲಿಸಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,”ಈ ರೀತಿಯ ಮನವಿಗಳನ್ನು 32ನೇ ವಿಧಿಯಡಿ ಪುರಸ್ಕರಿಸಲಾಗದು” ಎಂದಿತು. ಮುಂದುವರೆದು, “ಅರ್ಜಿದಾರರು ಸೂಕ್ತ ಪರಿಹಾರ ಕೋರಲು ಸ್ವತಂತ್ರರು. ಅರ್ಜಿ ತಿರಸ್ಕೃತ” ಎಂದಿತು.

ವಕೀಲ ಸಚಿನ್‌ ಶಣ್ಮುಖನ್‌ ಪೂಜಾರಿ ಅವರ ಮುಖೇನ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿವಾನ್‌ ಅಸೋಸಿಯೇಟ್ಸ್‌ನ ಫಾರೂಕ್‌ ಖಾನ್‌ ಸಿದ್ಧಪಡಿಸಿದ್ದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp