ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನವರಿ 1, 2023 ರವರೆಗೆ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ ದೆಹಲಿ ಸರ್ಕಾರದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬದುಕುವ ಹಕ್ಕಿನ ನೆಪದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ ಪರ ವಕೀಲ ಶಶಾಂಕ್ ಶೇಖರ್ ಝಾ ಅವರು, ದೀಪಾವಳಿ ಸೇರಿದಂತೆ ಹಬ್ಬದ ಋತುವಿನಲ್ಲಿ ಅನುಮತಿಸಲಾದ ಪಟಾಕಿಗಳನ್ನು ಮಾರಾಟ ಮಾಡುವ ಅಥವಾ ಬಳಸುವ ಸಾಮಾನ್ಯ ಜನರ ವಿರುದ್ಧ ಎಫ್ಐಆರ್ ದಾಖಲಿಸುವಂತಹ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ದೀಪಾವಳಿಯ ಸಮಯದಲ್ಲಿ ಮಾಲಿನ್ಯದ ಮಟ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನೀವು ದೆಹಲಿಯ ಖಾಯಂ ನಿವಾಸಿ, ಅಲ್ಲವೇ? ಮಾಲಿನ್ಯವನ್ನು ನೀವು ನೋಡಿದ್ದೀರಾ? ಮಾಲಿನ್ಯವನ್ನು ಹೆಚ್ಚಿಸಲು ನಾವು ಬಯಸುವುದಿಲ್ಲ ಎಂದು ಸಂಸದರ ಪರ ವಕೀಲರಲ್ಲಿ ಪೀಠ ಹೇಳಿದ್ದು, ದೆಹಲಿ ಸರ್ಕಾರದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.