ನವದೆಹಲಿ: ಅಲೋಪತಿಯಂತಹ ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಾಬಾ ರಾಮ್ ದೇವ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ಅವರನ್ನು ನಿರ್ಬಂಧಿಸುವಂತೆ ಕೇಂದ್ರವನ್ನು ಕೇಳಿದೆ.
ಆಯುರ್ವೇದವನ್ನು ಜನಪ್ರಿಯಗೊಳಿಸಲು ಅಭಿಯಾನಗಳನ್ನು ನಡೆಸಬಹುದು. ಆದರೆ ಇತರ ವ್ಯವಸ್ಥೆಗಳನ್ನು ನಿಂದಿಸಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಹೇಳಿದೆ.
ಅವರು ವೈದ್ಯರು ಮತ್ತು ಇತರ ವೈದ್ಯ ಪದ್ಧತಿಗಳನ್ನು ಏಕೆ ನಿಂದಿಸಬೇಕು? ನಾವು ಅವರನ್ನು ಗೌರವಿಸುತ್ತೇವೆ. ಏಕೆಂದರೆ ಅವರು ಯೋಗವನ್ನು ಪ್ರತಿಪಾದಿಸಿದ್ದಾರೆ. ಆದರೆ ಅವರು ಇತರ ವ್ಯವಸ್ಥೆಗಳನ್ನು ಟೀಕಿಸಬಾರದು ಎಂದ ನ್ಯಾಯಾಧೀಶರು, ಆಯುರ್ವೇದವು ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ ಎಂಬುದಕ್ಕೆ ಖಾತರಿ ಏನು ಎಂದು ಪ್ರಶ್ನಿಸಿದರು
ಕೋವಿಡ್ ಲಸಿಕೆಗಳಂತಹ ಹಸ್ತಕ್ಷೇಪಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಮೂಲಕ ರಾಮ್ ದೇವ್ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರ ಸಂಘಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಐಎಂಎ ಮನವಿಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಕೋವಿಡ್ 2ನೇ ಅಲೆಯ ವೇಳೆ ದೇಶಾದ್ಯಂತ ಸಾವಿರಾರು ಜನರು ಬಲಿಯಾದಾಗ, ಅಲೋಪಥಿ ಔಷಧಿಗಳಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ಬಾಬಾ ರಾಮ್ ದೇವ್ ವೀಡಿಯೋವೊಂದರಲ್ಲಿ ಹೇಳಿಕೆ ನೀಡಿದ್ದರು.
ರಾಮ್ ದೇವ್ ವೈಜ್ಞಾನಿಕ ಔಷಧವನ್ನು ಮಾನನಷ್ಟಗೊಳಿಸಿರುವ ಮೂಲಕ ಜನರನ್ನು ದಾರಿತಪ್ಪಿಸಿದ್ದರಿಂದ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘವು(ಐಎಂಎ) ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.