ಪೆಗಾಸೆಸ್ ಕುರಿತು ಮುಂದಿನ ವಾರ ಸುಪ್ರೀಂ ಕೋರ್ಟ್ ವಿಚಾರಣೆ

Prasthutha|

ನವದೆಹಲಿ, ಜುಲೈ 30: ರಾಷ್ಟ್ರ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದ ಪೆಗಾಸೆಸ್ ಕಣ್ಗಾವಲು ಕುರಿತು ವಿಶೇಷ ತನಿಖೆಗೆ ಕೋರಿ ಸುಪ್ರೀಮ್ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಮುಂದಿನ ವಾರ ನಡೆಸಲಾಗುವುದೆಂದು ಭಾರತೀಯ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ತಿಳಿಸಿದ್ದಾರೆ. ಈ ಹಗರಣದಲ್ಲಿ ದೇಶದ ಪ್ರತಿಪಕ್ಷದ ನಾಯಕರು, ಪತ್ರಕರ್ತರು, ನ್ಯಾಯಾಧೀಶರು, ಹೋರಾಟಗಾರರು ಸೇರಿದಂತೆ ಹಲವಾರು ಗಣ್ಯರ ಫೋನ್ ಗಳನ್ನು ಕಣ್ಗಾವಲಿನಲ್ಲಿಡಲಾಗಿತ್ತು.

- Advertisement -

ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿಕುಮಾರ್ ಅವರು ಈ ಹಗರಣದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ವನ್ನು ರಚಿಸುವಂತೆ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಿಲ್ ಅವರು ಈ ದೇಶದ ಜನರ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಈ ಹಗರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿಯವರನ್ನು ವಿನಂತಿಸಿದ್ದರು. ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ನ್ಯಾಯಾಧೀಶರು ಪೆಗಾಸೆಸ್ ಸ್ಪೈವೇರ್ ಕಣ್ಗಾವಲಿನ ಸಂಭಾವ್ಯ ಪಟ್ಟಿಯಲ್ಲಿದ್ದಾರೆ ಎಂದು ಸಿಬಲ್ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿದರು.

ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಈ ಅರ್ಜಿಯ ವಿಚಾರಣೆಯು ಮುಂದಿನವಾರ ನಡೆಸಲಾಗುವುದೆಂದು ನ್ಯಾಯಮೂರ್ತಿ ರಮಣ ತಿಳಿಸಿದ್ದಾರೆ. ಇಸ್ರೇಲ್ ಮೂಲದ ಎನ್.ಎಸ್.ಒ ಸಂಸ್ಥೆಯ ಪೆಗಾಸೆಸ್ ಸ್ಪೈವೇರ್ ಬಳಸಿ ಭಾರತದಲ್ಲಿನ 142 ಗಣ್ಯರ ಮೊಬೈಲ್ ಫೋನ್ ಅನ್ನು ಕಣ್ಗಾವಲಿನಟ್ಟಿರುವುದು ಜಾಗತಿಕ ಮಾಧ್ಯಮ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.

- Advertisement -

ಪೆಗಾಸೆಸ್ ಸ್ಪೈವೇರ್ ಬಳಸಿ ದೇಶದ ಜನತೆಯನ್ನು ಕಣ್ಗಾವಲಿನಲ್ಲಿಡಲು ಪರವಾನಿಗೆಯನ್ನು ಪಡೆಯಲಾಗಿದೆಯೇ ಅಥವಾ ನೇರವಾಗಿ ಬಳಲಾಗಿದೆಯೇ ಎಂಬ ಮಾಹಿತಿಯನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಮ್ ಮತ್ತು ಶಶಿ ಕುಮಾರ್ ಅವರ ಅರ್ಜಿಯಲ್ಲಿ ಕೋರಲಾಗಿದೆ. ಮಾತ್ರವಲ್ಲದೇ ಸರ್ಕಾರದ ಈ ನಡೆ ಸ್ವಾತಂತ್ರ್ಯ ಮತ್ತು ಖಾಸಗಿತನದ ಉಲ್ಲಂಘನೆಯೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಲವಾರು ಜನರ ಫೋನ್ ಅನ್ನು ಕಣ್ಗಾವಲನಟ್ಟಿರುವುದು ಫೋರೆನ್ಸಿಕ್ ವಿಶ್ಲೇಷಣೆಯಿಂದ ಸಾಬೀತಾಗಿದೆಯೆಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿ ಮಾಡಿದೆಯೆಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಸರ್ಕಾರ ಮತ್ತು ಅದರ ಏಜಿನ್ಸಿ ಗಳಿಗೆ ಮಾತ್ರ ಸ್ಪೈವೇರ್ ಮಾರಾಟ ಮಾಡಲಾಗುವುದೆಂದು ತಿಳಿಸಿರುವ ಎನ್.ಎಸ್.ಒ ಕಂಪೆನಿ ಫೋನ್ ಗಳಿಂದ ಸಂಗ್ರಹಿತ ಡಾಟಾವನ್ನು ಸೋರಿಕೆ ಮಾಡುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ. ಆದರೆ ಈ ಅರೋಪವನ್ನು ಕೇಂದ್ರ ತಳ್ಳಿಹಾಕಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮತ್ತು ವಕೀಲ ಎಮ್.ಎಲ್.ಶರ್ಮಾ ಅವರು ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

Join Whatsapp