ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿ ನಾಯಕರಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದ್ದು, ಯುಎಪಿಎ ಕಾಯ್ದೆಯ ಬಗ್ಗೆ ಹೈಕೋರ್ಟ್ ನೀಡಿರುವ ಹೇಳಿಕೆಯನ್ನು ಉನ್ನತ ಕೋರ್ಟ್ ಪರಿಶೀಲಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಗಲಭೆಯ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ವಿದ್ಯಾರ್ಥಿ ನಾಯಕರಾದ ನತಾಶ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ನಿನ್ನೆ ಈ ಮೂವರು ವಿದ್ಯಾರ್ಥಿಗಳು ಬಿಡುಗಡೆಯಾಗಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಈ ಮೇಲ್ಮನವಿಯ ವಿಚಾರಣೆ ನಡೆಸಿ “ಯುಎಪಿಎ ಕಾಯ್ದೆಯನ್ನು ದೆಹಲಿ ಹೈಕೋರ್ಟ್ ಅರ್ಥೈಸಿದ ವಿಧಾನದ ಬಗ್ಗೆ ಸುಪ್ರೀಂ ಕೋರ್ಟ್ನ ಪರಾಮರ್ಶೆ ಅಗತ್ಯವಿರುತ್ತದೆ” ಎಂದು ಸ್ಪಷ್ಟಪಡಿಸಿತು.
ಹೈಕೋರ್ಟ್ ಆದೇಶವನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಮತ್ತು ಯಾವುದೇ ನ್ಯಾಯಾಲಯ ಇದನ್ನು ಅವಲಂಬಿಸಬಾರದು ಎಂದು ಹೇಳಿದೆ.
ಆದಾಗ್ಯೂ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಪೀಠ ನಿರಾಕರಿಸಿತು. ಈ ಹಂತದಲ್ಲಿ ಜಾಮೀನು ನೀಡಿದ ಹೈಕೋರ್ಟ್ ತೀರ್ಪಿನ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು.