ಹಾಲ್ ಟಿಕೆಟ್ ಸಿಗದವರಿಗೆ ಪೂರಕ ಪರೀಕ್ಷೆ: ಸಚಿವ ಸುರೇಶ್ ಕುಮಾರ್

Prasthutha|

ಬೆಂಗಳೂರು, ಜು.19: ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯುತ್ತಿದೆ. ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾಗಿರುವ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಲ್ ಟಿಕೆಟ್ ಪಡೆಯಲಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವಕಾಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

- Advertisement -

ಪರೀಕ್ಷೆಯಲ್ಲಿ ಆರೋಗ್ಯ ಇಲಾಖೆಯ ಎಸ್ ಒಪಿ ಅನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲ, ಬದಲಿಗೆ ಸುರಕ್ಷತಾ ಕೇಂದ್ರಗಳಾಗಿವೆ. ರಾಜ್ಯಾದ್ಯಂತ 34 ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ನಾಳೆ ಸಂಜೆ 4.30ರ ವೇಳೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.


ಕೋವಿಡ್ ಪರಿಸ್ಥಿತಿಯ ನಡುವೆಯೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ರಾಜ್ಯಾದ್ಯಂತ ಇಂದು ಎಸ್.ಎಸ್.ಎಲ್.ಸಿ. ವಿಷಯವಾರು ಪರೀಕ್ಷೆ ನಡೆಸಲಾಯಿತು. ಎಸ್.ಎಸ್.ಎಲ್.ಸಿ. ಇತಿಹಾಸದಲ್ಲಿ ಮೊದಲ ಬಾರಿಗೆ ಬಹು ಆಯ್ಕೆ ವಿಷಯಗಳ ಕುರಿತ ಪರೀಕ್ಷೆ ನಡೆದಿದ್ದು, ಒಂದೇ ತಲಾ 40 ಅಂಕಗಳಿಗೆ ಮೂರು ಗಂಟೆಯಲ್ಲಿ ಮೂರು ವಿಷಯಗಳ ಪರೀಕ್ಷೆ ಬರೆದಿರುವುದು ಸಹ ಹೊಸ ಬೆಳವಣಿಗೆಯಾಗಿದೆ.

- Advertisement -


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುನರಾವರ್ತಿತ ಅಭ್ಯರ್ಥಿಗಳಿಗೂ ಸಹ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿದ್ದು, ತೇರ್ಗಡೆ ಹೊಂದಲು ಸಹಕಾರಿಯಾಗಲಿದೆ. ಒಟ್ಟು 8 ಲಕ್ಷದ 76 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಿತು. ಇಂದು ಒಂದೇ ದಿನ ಗಣಿತ, ವಿಜ್ಞಾನ, ಸಮಾಜವಿಜ್ಞಾನ ಮೂರು ವಿಷಯಗಳ ಪರೀಕ್ಷೆ ನಡೆಸಲಾಯಿತು. ಕೊರೊನಾ ಕಾರಣದಿಂದ ಪರೀಕ್ಷೆಯನ್ನು ಕೇವಲ ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಗುರುವಾರ ಜುಲೈ 22ರಂದು ಕನ್ನಡ, ಇಂಗ್ಲಿಷ್, ಹಿಂದಿ ಭಾಷಾವಾರು ಪರೀಕ್ಷೆಗಳು ನಡೆಯಲಿವೆ.

ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಡೆಸ್ಕ್ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಗೆ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಒಂದು ಪರೀಕ್ಷಾ ಕೇಂದ್ರದಲ್ಲಿ 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಪರೀಕ್ಷೆಗೂ ಮುನ್ನ ಹಾಗೂ ಪರೀಕ್ಷೆ ಬಳಿಕ ಕೊಠಡಿ ಸ್ಯಾನಿಟೈಸಿಂಗ್ ಮಾಡಲಾಯಿತು. ಕೆಮ್ಮು, ನೆಗಡಿ, ಜ್ವರ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗಿತ್ತು. ಸುಗಮ ಪರೀಕ್ಷೆ ನಡೆಸಲು ಒಂದು ಲಕ್ಷದ 19 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರ, ಕೊಠಡಿ, ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

Join Whatsapp