ತೊಕ್ಕೊಟ್ಟು ಹಿರಾ ಕಾಲೇಜಿನ SSLC ಪರೀಕ್ಷಾ ಕೇಂದ್ರದಲ್ಲಿ ಬೆಂಕಿ ಅವಘಡ : 208 ವಿದ್ಯಾರ್ಥಿಗಳ ಸ್ಥಳಾಂತರ

Prasthutha|

ಮಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರ ಇದ್ದ ಕಚೇರಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಪರೀಕ್ಷೆ ಬರೆಯುತ್ತಿದ್ದ 208ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಯಾಲಜಿ ಲ್ಯಾಬಿನಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿ ಬೆಂಕಿ ಅನಾಹುತ ನಡೆದಿದೆ.

- Advertisement -

ಮಂಗಳೂರಿನ ಬಬ್ಬುಕಟ್ಟೆ ಹಿರಾ ವಿದ್ಯಾಸಂಸ್ಥೆಯ ಬಯಾಲಜಿ ಲ್ಯಾಬಿನಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿದೆ. ಘಟನೆಯಲ್ಲಿ ಲ್ಯಾಬ್ ಒಳಗಿದ್ದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳು ಸುಟ್ಟು ಕರಕಲಾಗಿವೆ. ಆಡಳಿತ ಸಂಸ್ಥೆಯವರು ಕೂಡಲೇ ಪರೀಕ್ಷೆಗೆ ಬಂದಿದ್ದ 208 ವಿದ್ಯಾರ್ಥಿಗಳನ್ನು ಪಕ್ಕದ ಡಿಗ್ರಿ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಿ ಬೆಂಕಿ ನಂದಿಸಿದ್ದಾರೆ. ಪರೀಕ್ಷೆಗೆ ಬಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿಯಿಂದಲೇ ಆ ಪ್ರದೇಶದಲ್ಲಿ ವಿದ್ಯುತ್ ಸರಬರಾಜದಲ್ಲಿ ಏರಿಳಿತ ಉಂಟಾಗಿದ್ದು ಹಿರಾ ಕಾಲೇಜು ಆಡಳಿತ ಮಂಡಳಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಮೆಸ್ಕಾಂ ಅಧಿಕಾರಿಗಳು ಸದ್ಯ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಇಂದು ಮಧ್ಯಾಹ್ನ ಪರಿಶೀಲಿಸುವುದಾಗಿ ಹೇಳಿದ್ದರು. ಸಂಸ್ಥೆಯ ಪಕ್ಕದ ಮನೆಗಳಿಗೂ ಇದೇ ರೀತಿ ವಿದ್ಯುತ್ ಪೂರೈಕೆಯಲ್ಲಿ ಏರಿಳಿತ ಉಂಟಾಗಿತ್ತೆಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಮೆಸ್ಕಾಂ ಹಾಗೂ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Join Whatsapp