ಸುಳ್ಯ: ದಂತ ವೈದ್ಯ ವಿದ್ಯಾರ್ಥಿನಿಯೊಬ್ಬಳಿಗೆ ಜಾತಿ ನಿಂದನೆಗೈದು ಮಾನಸಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಐ.ಪಿ.ಸಿ ಕಾಲೇಜು ಬಳಿ ನಡೆದಿದೆ.
ಹಲ್ಲೆಗೊಳಗಾದ ಡಾ. ಪಲ್ಲವಿ ಎನ್, ಪಿ (27) ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಅದರಂತೆ ವೈದ್ಯ ವಿದ್ಯಾರ್ಥಿಗಳಾದ ಡಾ.ವಿಶಾಕ್, ಡಾ. ಐಶ್ವರ್ಯ ಆರ್, ಡಾ. ಆಲ್ಫಾ ಮೇರಿ ಮ್ಯಾಥ್ಯೂ, ಡಾ. ಡೆನೆಲ್ ಸೆಬಾಸ್ಟೀನ್, ಡಾ. ರಿಷಿಕೇಶ್, ದಯಾ ಆನ್ ವರ್ಗೀಸ್ ಹಾಗೂ ಇತರರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 323, 504, 506 R/W 149 ಐಪಿಸಿ ಮತ್ತು SC/ST ಕಾಯ್ದೆಯ 3(1) (s)ಯಡಿ ಎಫ್’ಐಆರ್ ದಾಖಲಾಗಿದೆ.
ದೂರುದಾರೆ ಪಲ್ಲವಿ ಅವರು ಸುಳ್ಯ ಕಸಬಾ ಗ್ರಾಮದ ಕೆ.ವಿ.ಜಿ ದಂತ ಕಾಲೇಜಿನ 3 ನೇ ವರ್ಷದ ಬಾಯಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ವಿಧ್ಯಾರ್ಥಿನಿಯಾಗಿದ್ದಾರೆ. ಅದೇ ಕಾಲೇಜಿನಲ್ಲಿ ಓದುತ್ತಿರುವ ಇತರ ವಿದ್ಯಾರ್ಥಿಗಳಾದ ಆರೋಪಿಗಳು ಡಾ. ಪಲ್ಲವಿ ಅವರಿಗೆ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಸಿಕ್ಕಿದ್ದನ್ನು ಪ್ರಶ್ನಿಸಿ ಕಿರುಕುಳ ನೀಡಿದ್ದಾರೆ. ಅದೇ ವಿಚಾರವಾಗಿ ಸುಮಾರು ಆರು ತಿಂಗಳಿಂದ ಮಾನಸಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಆರೋಪಿಗಳು ಕೋರ್ಸ್ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾತ್ರವಲ್ಲ ಪಲ್ಲವಿ ಅವರನ್ನು “ ಕೀಳು ಜಾತಿಯ ನಾಯಿಯಾದ ನಿನಗೆ ಯೂನಿವರ್ಸಿಟಿ Rank ಯಾಕೆ ಬೇಕು, ಹೇಗೆ ಬಂತು?, ನಿನ್ನನ್ನು ಸಾಯಿಸುವುದಾಗಿ” ಜೀವ ಬೆದರಿಕೆ ಹಾಕಿದ್ದು, ಅದರಂತೆ ಡಿಸೆಂಬರ್ 21 ರಂದು ರಾತ್ರಿ 10 ಗಂಟೆ ಸುಮಾರಿಗೆ ಪಲ್ಲವಿ ಮತ್ತು ಅಣ್ಣ ವಿಜಯ್ ಹಾಗೂ ಪಲ್ಲವಿ ಅವರ ಸಹಪಾಠಿಯಾದ ಡಾ. ಹನೀಶ್ ಕಿರಣ್ ನೊಂದಿಗೆ ಸುಳ್ಯದ ಉಡುಪಿ ಗಾರ್ಡನ್’ನಲ್ಲಿ ಊಟ ಮಾಡಿ ಸುಳ್ಯದ ಐ.ಪಿ.ಎಸ್ ಸ್ಕೂಲ್’ನ ಹತ್ತಿರವಿರುವ ಡಾ. ಹನೀಶ್ ಕಿರಣ್ ಎಂಬವರ ಮನೆಗೆ ಬಿಡಲು ಹೋದಾಗ ಡಾ. ವಿಶಾಕ್ ಹಾಗೂ ಇತರರು ಮತ್ತೆ ಪಲ್ಲವಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಅವರ ಬಲ ಕಪಾಳಕ್ಕೆ ಎರಡು ಬಾರಿ ಹೊಡೆದು, ಕೆಳಗೆ ಬಿದ್ದ ಪಲ್ಲವಿ ಅವರ ಹೊಟ್ಟೆಗೆ ತುಳಿದಿದ್ದು, ಇದನ್ನು ಬಿಡಿಸಲು ಬಂದ ಪಲ್ಲವಿ ಅವರ ಅಣ್ಣನ ಎದೆಗೆ ಹಾಗೂ ಬಲ ಮೊಣಕಾಲಿಗೆ ಒದ್ದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಪಲ್ಲವಿ ಹಾಗೂ ಅವರ ಅಣ್ಣ ಸುಳ್ಯ ಸರ್ಕಾರಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಎಫ್’ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳಿಂದ ಪ್ರತಿ ದೂರು
ಸ್ನೇಹಿತ ಝೈದ್ದಿನ್ ಹಜೀಲ್ ನನ್ನು ಸ್ಪಂದನ ಪಿ ಜಿ ಕಡೆಗೆ ಡ್ರಾಪ್ ಮಾಡಲು ಹೋಗುತ್ತಿರುವಾಗ ಸುಳ್ಯ ಕುರುಂಜಿಭಾಗ್ ಕೆ.ವಿ.ಜಿ. ಐಪಿಎಸ್ ಸ್ಕೂಲ್ ನ ಹತ್ತಿರ ತಲುಪುತ್ತಿದ್ದಂತೆ ಇನ್ನೋವಾ ಕಾರೊಂದು ಬೆನ್ನಟ್ಟಿ ಬಂದು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹರೀಶ್, ಪಲ್ಲವಿ ಹಾಗೂ ಪಲ್ಲವಿ ಸಹೋದರ ಮತ್ತು ಅಪರಿಚಿತ ವ್ಯಕ್ತಿಯೊಬ್ಬ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಕ್ ಲಿವರ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಕೆ ವಿ ಜಿ ಡೆಂಟಲ್ ಕಾಲೇಜಿನ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಆರೋಪಿ ಡಾ.ವಿಶಾಕ್ ಕೂಡ ಪ್ರತಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.