‘‘ನಾನು ಕಷ್ಟಪಟ್ಟು ಓದುತ್ತಿದ್ದೆ. ಆದರೆ ಓದಿದ್ದು ತಲೆಗೆ ಹತ್ತುತ್ತಿರಲಿಲ್ಲ. ಒಂದಿಷ್ಟು ಅರ್ಥವಾಗಿದ್ದರೂ ಜ್ಞಾಪಕದಲ್ಲಿರುತ್ತಿರಲಿಲ್ಲ. ನನ್ನ ಅಪ್ಪ-ಅಮ್ಮ ಮಾತ್ರ ನಾನು ಹೆಚ್ಚು ಅಂಕಗಳನ್ನು ಪಡೆದು, ಇಂಜಿನಿಯರೋ, ಡಾಕ್ಟರೋ ಆಗಬಹುದೆಂಬ ದೊಡ್ಡ ಆಸೆಯನ್ನಿಟ್ಟುಕೊಂಡಿದ್ದರು. ಹೆಚ್ಚು ಅಂಕಗಳಿರಲಿ, ನನ್ನಿಂದ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ಇದರಿಂದ ನನಗೆ ನನ್ನ ಮೇಲೆಯೇ ಅಸಹ್ಯವಾಗುತ್ತಿದೆ. ಹೆತ್ತವರಿಗಂತೂ ಬೇಸರ, ನಿರಾಸೆ ಆಗುವುದಂತೂ ಖಂಡಿತ. ನನ್ನ ಅಪ್ಪ ದೊಡ್ಡ ಪ್ರೊಫೆಸರ್, ಅವರಿಗೆ ಅವಮಾನವಾಗುತ್ತೆ. ನನ್ನ ಗೆಳೆಯರು, ಸಂಬಂಧಿಕರು ನನ್ನ ಕಂಡು ತಮಾಷೆ ಮಾಡಬಹುದು. ಇವನ್ನೆಲ್ಲಾ ನೆನೆಸಿಕೊಂಡು ನಾನು ಸಾಯೋದೇ ವಾಸಿ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದರಲ್ಲಿ ಇನ್ಯಾರದೂ ತಪ್ಪಿಲ್ಲ, ನನ್ನನ್ನು ಎಲ್ಲರೂ ಕ್ಷಮಿಸಿ ಬಿಡಿ’’. ಇದು ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಸಾಯುವ ಮುನ್ನ ಬರೆದಿಟ್ಟು ಹೋಗಿದ್ದ ಪತ್ರ.
2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಯುವಕರು ಮತ್ತು ಮಧ್ಯವಯಸ್ಕರ ಪ್ರಮಾಣವೇ ಹೆಚ್ಚು. 2020ರಲ್ಲಿ 18 ವರ್ಷಕ್ಕಿಂತ ಕೆಳಗಿನ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ ಸಿಆರ್ ಬಿ ಕಳೆದ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ. ಅಂದರೆ ಪ್ರತಿದಿನ ಸರಾಸರಿ ಸುಮಾರು 31 ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆಂದಾಯಿತು. ‘18 ವರ್ಷಕ್ಕಿಂತ ಕೆಳಗಿನ ಮಕ್ಕಳ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಕೌಟುಂಬಿಕ ಸಮಸ್ಯೆಗಳು’ ಎಂಬುದಾಗಿ (National Crime Record Bureau) ಎನ್ ಸಿಆರ್ ಬಿ ವರದಿಯು ಹೇಳುತ್ತದೆ. ಮಕ್ಕಳ ಮೇಲೆ ಅಧಿಕಾರ ಚಲಾಯಿಸುವುದು ಮತ್ತು ಅವರಿಗೆ ಬೆದರಿಕೆಯೊಡ್ಡುವುದು ಮಕ್ಕಳ ಆತ್ಮಹತ್ಯೆಗೆ ಅತ್ಯಂತ ಪ್ರಮುಖ ಕಾರಣವಾಗಿದೆ. ಮಕ್ಕಳ ವಿಷಯದಲ್ಲಿ ಸಮಾನತೆ ಮತ್ತು ನ್ಯಾಯಪರತೆಯನ್ನು ಕಾಯ್ದುಕೊಳ್ಳುವಲ್ಲಿ ಹೆತ್ತವರಿಗೆ ಸಾಕಷ್ಟು ತರಬೇತಿ ಸಿಕ್ಕಿಲ್ಲ ಎಂದು ಮುಂಬೈಯ ಶಹೆರ್ ಸಂಸ್ಥೆಯ ಸಹ ಸಂಸ್ಥಾಪಕಿ ಹಾಗೂ ನಿರ್ದೇಶಕಿ ರಮಾ ಶ್ಯಾಮ್ ಹೇಳುತ್ತಾರೆ.
ಸಾಂಕ್ರಾಮಿಕ ರೋಗ ಮತ್ತು ಅದರ ಜೊತೆಗೆ ಬಂದ ಲಾಕ್ ಡೌನ್ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಕಳವಳ ಮತ್ತು ಅನಿಶ್ಚಿತತೆಯನ್ನು ಹುಟ್ಟು ಹಾಕಿದೆ. ಮಕ್ಕಳ ದೈನಂದಿನ ಚಟುವಟಿಕೆಗಳು ಅಸ್ತವ್ಯಸ್ತಗೊಂಡವು. ಅವರು ತಮ್ಮ ಸ್ನೇಹಿತರ ಸಂಪರ್ಕ ಕಳೆದುಕೊಂಡರು ಹಾಗೂ ಹೊರಾಂಗಣ ಕ್ರೀಡೆಗಳನ್ನು ಆಡುವುದು ಮತ್ತು ಹೊರಗೆ ಸುತ್ತಾಡುವ ಅವಕಾಶಗಳಿಂದಲೂ ವಂಚಿತರಾದರು. ಈ ಎಲ್ಲ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರಿದೆ ಎಂದು SOS childrens Villages of Indiaದ ಪ್ರಧಾನ ಕಾರ್ಯದರ್ಶಿ ಸುಮಂತಾ ಕಾರ್ ಹೇಳುತ್ತಾರೆ. ತಮ್ಮನ್ನು ಒಬ್ಬ ಅಥವಾ ಇಬ್ಬರೂ ಹೆತ್ತವರು ಕಡೆಗಣಿಸುತ್ತಾರೆ ಎಂಬ ಅಭಿಪ್ರಾಯಕ್ಕೆ ಮಕ್ಕಳು ಬಂದಿದ್ದಾರೆ’ ಎಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರನ್ನು ಮಾತನಾಡಿಸಿರುವ ರೋಟರಿ ಕ್ಲಬ್ ಆ್ಯಂಡ್ ಮೆಂಟಲ್ ಹೆಲ್ತ್ ಪರಿಣಿತ ಡಾ. ಪ್ರಕೃತಿ ಪೋಡಾರ್ ಹೇಳುತ್ತಾರೆ.
2020ರಲ್ಲಿ ದೇಶದಲ್ಲಿ ಕೋವಿಡ್ ನಿಂದ ಸತ್ತವರ ಸಂಖ್ಯೆ 1,48,774 ಆದರೆ ಆತ್ಮಹತ್ಯೆಯಲ್ಲಿ ಮೃತಪಟ್ಟವರ ಸಂಖ್ಯೆ 1,53,052, National Crime Record Bureau ಪ್ರಕಾರ 2019ರಲ್ಲಿ ದೇಶದಲ್ಲಿ 1,39,123 ಆತ್ಮಹತ್ಯೆಗಳು ನಡೆದಿವೆ. ಅಂದರೆ ಪ್ರತಿದಿನ ಸರಾಸರಿ 381 ಮಂದಿ ಆತ್ಮಹತ್ಯೆ ಮಾಡಿದ್ದಾರೆ. 2018ರಲ್ಲಿ ಆತ್ಮಹತ್ಯೆಯ ಪ್ರಮಾಣ 1,34,519 ಮತ್ತು 2017ರಲ್ಲಿ 1,29,887 ಆಗಿತ್ತು. ದೇಶಾದ್ಯಂತ ಆತ್ಮಹತ್ಯೆಯ ಪ್ರಕರಣಗಳು ಏರುತ್ತಿರುವುದು ಆರೋಗ್ಯಕರ ಬೆಳವಣಿಗೆಯಂತೂ ಖಂಡಿತ ಅಲ್ಲ. ಬದಲಾಗಿ ಇದು ಒಂದು ಕೌಟುಂಬಿಕ ದುರಂತ, ಸಾಮಾಜಿಕ ಸಮಸ್ಯೆ ಹಾಗೂ ಸಾರ್ವತ್ರಿಕ ಪಿಡುಗು, ಶಾಲಾ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ನಗರ ಪ್ರದೇಶಗಳಿಂದ ಹಿಡಿದು ಹಳ್ಳಿಯವರೆಗೆ, ರೈತರಿಂದ ಹಿಡಿದು ಸುಶಿಕ್ಷಿತ ಉದ್ಯೋಗಿಗಳವರೆಗೆ, ಒಂದು ಹೊತ್ತಿನ ಊಟಕ್ಕಿಲ್ಲದ ದರಿದ್ರನಿಂದ ಹಿಡಿದು ಬಿಲಿಯಾಧಿಪತಿಯವರೆಗೆ ಎಲ್ಲಾ ಕಡೆ ಹರಡಿ ಹಬ್ಬಿರುವ ಈ ಆತ್ಮಹತ್ಯೆಯ ಆಲೋಚನೆಗಳು, ಪ್ರಯತ್ನಗಳು ಹಾಗೂ ಪ್ರಕರಣಗಳು ಆಘಾತಕಾರಿ. ಪ್ರತಿ ವರ್ಷ ಜಾಗತಿಕವಾಗಿ 8 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ವರದಿಯಿದೆ. ಅದರಲ್ಲಿ ಶೇಕಡಾ 17ರಷ್ಟು ಭಾರತದಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳ ಪಾಲಿಗಂತೂ 2019 ಘನಘೋರ ವರ್ಷವಾಗಿತ್ತು. ಎನ್‌ಸಿಆರ್ ಬಿ ಪ್ರಕಾರ 2019ರಲ್ಲಿ ಪ್ರತಿ ಒಂದು ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆಯ ಮೊರೆ ಹೋಗಿದ್ದಾನೆ. ಒಟ್ಟು 10,225 ವಿದ್ಯಾರ್ಥಿಗಳು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ 25 ವರ್ಷಗಳಲ್ಲೇ ಇದು ಅತ್ಯಧಿಕ ಎಂದು ಹೇಳಲಾಗಿದೆ. 1995ರಿಂದ 2019ರ ನಡುವೆ 1,70,000 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಯ ಸಂಖ್ಯೆಯೂ ಏರುತ್ತಿದೆ. ಎನ್ ಸಿಆರ್ ಬಿ ಪ್ರಕಾರ 1997ರಿಂದ 2006ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 10,95,219 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 1,66,304 ಜನರು ರೈತರಾಗಿದ್ದಾರೆ. ಎನ್ ಸಿಆರ್ ಬಿ ಅಂಕಿ ಅಂಶಗಳ ಪ್ರಕಾರ ಕೃಷಿಯ ಮೇಲೆ ಅವಲಂಭಿತವಾದ 28 ಜನರು ಪ್ರತಿದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಎನ್ ಸಿಆರ್ ಬಿ (, National Crime Record Bureau) ವರದಿಗಳು ಪೊಲೀಸರ ದಾಖಲೆಗಳನ್ನು ಆಧರಿಸಿದೆಯೇ ಹೊರತು ಅವುಗಳು ನಿಜವಾದ ಸಂಖ್ಯೆಗಳನ್ನು ಪ್ರತಿನಿಧಿಸುವುದಿಲ್ಲ. ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ಮಾಡದೆಯೇ ಅವರುಗಳ ಅಂತ್ಯಕ್ರಿಯೆಯನ್ನು ಮಾಡುವುದರಿಂದ ಇವುಗಳು ದಾಖಲಾಗುವುದಿಲ್ಲ. ಹಾಗಾಗಿ, ವಾಸ್ತವದಲ್ಲಿ ನಡೆಯುವ ಆತ್ಮಹತ್ಯೆಗಳಿಗಿಂತ ತುಂಬಾ ಕಡಿಮೆ ಸಂಖ್ಯೆಯನ್ನು ತೋರಿಸಲಾಗುತ್ತದೆ.
ನಮ್ಮ ಸಂವಿಧಾನದಲ್ಲಿ Right to live ಅಂದರೆ ಎಲ್ಲರಿಗೂ ಬದುಕುವ ಹಕ್ಕು ಇದೆ. ಆದರೆ Right to die ಅಂದರೆ ಸಾಯುವ ಹಕ್ಕುವ ಇಲ್ಲ. ಭಾರತದ ಸಂವಿಧಾನದ 21 ಕಲಂ ಅನ್ವಯ ಪ್ರತಿಯೊಬ್ಬ ಪ್ರಜೆಗೂ ತನ್ನಿಷ್ಟದಂತೆ ಜೀವಿಸುವ ಹಕ್ಕು ಇದೆ. ಆತ್ಮಹತ್ಯೆಗೆ ಪ್ರಯತ್ನಿಸುವುದು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದು ಎರಡೂ ಅಪರಾಧಗಳೇ. ಐಪಿಸಿ 309ರ ಪ್ರಕಾರ ಆತ್ಮಹತ್ಯೆ ಒಂದು ಅಪರಾಧ ಹಾಗೂ ಇತರರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಕೂಡಾ ಐಪಿಸಿ 206ರ ಪ್ರಕಾರ ಅಪರಾಧವೆನಿಸುತ್ತದೆ.
ಆತ್ಮಹತ್ಯೆಗೆ ಅನೇಕ ಕಾರಣಗಳಿವೆ. ಕೌಟುಂಬಿಕ ಸಮಸ್ಯೆ, ಅನಾರೋಗ್ಯ, ನಿರುದ್ಯೋಗ, ಸಾಲಭಾದೆ, ವೈವಾಹಿಕ ಕಾರಣಗಳು, ವರದಕ್ಷಿಣೆ ಕಿರುಕುಳ, ಪ್ರೇಮ ವೈಫಲ್ಯಗಳು, ಮಾದಕ ವಸ್ತು – ಮದ್ಯಪಾನ ಚಟ, ವೃತ್ತಿಪರ ಸಮಸ್ಯೆ, ಪರೀಕ್ಷೆಯಲ್ಲಿ ಅನುತೀರ್ಣ, ಆತ್ಮೀಯರ ಸಾವು, ಅಕ್ರಮ ಸಂಬಂಧ, ಸಾಮಾಜಿಕ ಗೌರವಕ್ಕೆ ಚ್ಯುತಿ, ದೌರ್ಬಲ್ಯ, ಬಂಜೆತನ, ಲೈಂಗಿಕ ಕಿರುಕುಳ ಮುಂತಾದವುಗಳು ಕೆಲವು ಪ್ರಧಾನ ಕಾರಣಗಳಾಗಿವೆ.
ಶಿಕ್ಷಿತರು ಹೆಚ್ಚಾದಂತೆಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲೂ ಹೆಚ್ಚಳವಾಗುತ್ತಿರುವುದಕ್ಕೆ ಏನು ಕಾರಣ? ಜನರ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಬಹುಮುಖ ಪಾತ್ರ ಇದೆ ಎಂದಾದರೆ, ಮತ್ತೇಕೆ ಆತ್ಮಹತ್ಯೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತಿದೆ? ಆದರೆ ಮುಸ್ಲಿಮ್ ಸಮುದಾಯದಲ್ಲಿ, ಆತ್ಮಹತ್ಯೆಯ ಪ್ರಮಾಣ ತುಂಬಾ ಕಡಿಮೆ. ಎಂತಹ ಕಷ್ಟಕಾಲ ಎದುರಾದರೂ, ಸಮಸ್ಯೆಗಳ ಸುಳಿಗೆ ಸಿಲುಕಿದರೂ ಮುಸ್ಲಿಮ್ ಸಮುದಾಯ ಆತ್ಮಹತ್ಯೆಯನ್ನು ಕೊನೆಯ ಆಯ್ಕೆಯಾಗಿಯೂ ಆರಿಸಿಕೊಳ್ಳುತ್ತಿಲ್ಲ. ಇದಕ್ಕೆ ಧಾರ್ಮಿಕ ನಂಬಿಕೆಯೇ ಪ್ರಮುಖ ಕಾರಣ. ಆತ್ಮಹತ್ಯೆಯನ್ನು ಇಸ್ಲಾಮ್ ಮಹಾಪಾಪವೆಂದು ಪರಿಗಣಿಸಿದೆ. ಕುರ್ ಆನಿನ 4ನೇ ಅಧ್ಯಾಯ ಅನ್ನಿಸಾ 29 ಮತ್ತು 30ನೇ ಸೂಕ್ತದಲ್ಲಿ ಸೃಷ್ಟಿಕರ್ತನು ಹೀಗೆ ಹೇಳುತ್ತಾನೆ: ‘ನೀವು ನಿಮ್ಮನ್ನೇ ವಧಿಸಿಕೊಳ್ಳಬೇಡಿರಿ ಮತ್ತು ಯಾರಾದರೂ ಅತಿಕ್ರಮ ಹಾಗೂ ಅಕ್ರಮವಾಗಿ ಹಾಗೆ ಮಾಡಿದರೆ ಅವನನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು’’. ಹಾಗೂ ಹದೀಸ್ ಗ್ರಂಥಗಳಲ್ಲಿ ಪ್ರವಾದಿ (ಸ.ಅ) ಹೇಳಿದ್ದಾರೆ. ಒಬ್ಬನು ಇಹಲೋಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾವ ವಿಧಾನವನ್ನು ಸ್ವೀಕರಿಸಿದ್ದನೋ ಪರಲೋಕದಲ್ಲಿ ಅಲ್ಲಾಹು ನರಕದಲ್ಲಿ ಅವನಿಂದ ಅದೇ ವಿಧಾನವನ್ನು ಪುನರಾವರ್ತಿಸುವಂತೆ ಮಾಡುವನು. ಉದಾಃ ಬೆಂಕಿ ಕೊಟ್ಟು ಪ್ರಾಣ ಕಳೆದುಕೊಂಡವನು ನರಕದಲ್ಲಿಯೂ ಅದೇ ವಿಧಾನದಲ್ಲಿ ನಿರಂತರ ಶಿಕ್ಷೆ ಅನುಭವಿಸುತ್ತಿರುತ್ತಾನೆ.
ಏಪ್ರಿಲ್ 11, 2020ರಂದು UK ಯ Daily Mail ಎಂಬ ಪತ್ರಿಕೆಯಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಜರ್ಮನಿಯ ಮ್ಯಾನ್ಹಮ್ ಯುನಿವರ್ಸಿಟಿಯ ಮನೋಶಾಸ್ತ್ರಜ್ಞರ ಒಂದು ತಂಡವು ಜಗತ್ತಿನಲ್ಲಿ ಯಾವ ಧರ್ಮದ ಜನರು ತಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಮತ್ತು ಸಂತೃಪ್ತರಾಗಿದ್ದಾರೆ ಎಂಬುದರ ಕುರಿತು ನಡೆಸಿದ ಅಧ್ಯಯನದಲ್ಲಿ 67,565 ಜನರ ಅಭಿಪ್ರಾಯವನ್ನು ಕಲೆ ಹಾಕಲಾಗಿತ್ತು. ಆ ಸಮೀಕ್ಷೆಯ ಪ್ರಕಾರ ಜೀವನದಲ್ಲಿ ಹೆಚ್ಚು ಸಂತೃಪ್ತರಾದವರು ದೇವರಲ್ಲಿ ನಂಬಿಕೆಯಿರುವವರಾಗಿದ್ದಾರೆ ಮತ್ತು ಜೀವನದಲ್ಲಿ ಅತೀ ಕಡಿಮೆ ಸಂತುಷ್ಟರಾದವರು ನಾಸ್ತಿಕರಾಗಿದ್ದಾರೆ. ದೇವರಲ್ಲಿ ವಿಶ್ವಾಸವಿಡುವವರಲ್ಲಿ ಹೆಚ್ಚು ಸಂತುಷ್ಟರಾದವರು ಒಂದನೇ ಸ್ಥಾನದಲ್ಲಿ ಮುಸ್ಲಿಮರಾಗಿದ್ದಾರೆಂದು ಸಮೀಕ್ಷೆ ಹೇಳುತ್ತದೆ. ನಂತರ ಕ್ರೈಸ್ತರು, ಆ ಬಳಿಕ ಬೌದ್ಧರು, ತದನಂತರ ಹಿಂದೂಗಳಿದ್ದಾರೆ. ಆದರೆ ಮುಸ್ಲಿಮರ ಮತ್ತು ಕ್ರೈಸ್ತರ ನಡುವೆ ತುಂಬಾ ಅಂತರವಿದೆ. ವಿಶೇಷವೆಂದರೆ ಈ ಸಮೀಕ್ಷೆಯನ್ನು ಯಾವುದೇ ಮುಸ್ಲಿಂ ಸಂಸ್ಥೆ ನಡೆಸಿದ್ದಲ್ಲ ಬದಲಾಗಿ ಮುಸ್ಲಿಮೇತರರೇ ನಡೆಸಿದ್ದಾರೆ. ಮುಸ್ಲಿಮರು ತಮ್ಮ ಜೀವನದಲ್ಲಿ ಸಂತುಷ್ಟರಾಗಲು ಪ್ರಮುಖ ಕಾರಣ ಏಕದೇವ ವಿಶ್ವಾಸವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ. ಅಲ್ಲಾಹನ ಹೊರತು ಆರಾಧಿಸಲು ಅರ್ಹರು ಯಾರೂ ಇಲ್ಲ. ಈ ಪ್ರಪಂಚವನ್ನು ಸೃಷ್ಟಿಸಿ ಅದನ್ನು ನಿಯಂತ್ರಿಸುವವನು ಆ ಏಕೈಕ ಪ್ರಭುವಾಗಿದ್ದಾನೆ ಮತ್ತು ಅವನು ಸರ್ವಶಕ್ತನಾಗಿದ್ದಾನೆಂಬ ದೃಢ ವಿಶ್ವಾಸದಿಂದಾಗಿ ಮುಸ್ಲಿಮರಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಬಹಳ ಕಡಿಮೆ. ಆದ್ದರಿಂದಲೇ ಮುಸ್ಲಿಮರ ಆತ್ಮಹತ್ಯೆಯ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಇತರ ಸಮುದಾಯಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯ ತೀರಾ ಕೆಳಮಟ್ಟದಲ್ಲಿದ್ದರೂ ಆತ್ಮಹತ್ಯೆಗೆ ಹೋಲಿಸಿದರೆ ಇತರ ಸಮುದಾಯಗಳಿಗೆ ಮಾದರಿಯಂತಿದೆ. ಅವರ ಅಧ್ಯಯನದ ಅಂತಿಮ ಪರಿಣಾಮದ ಘೋಷಣೆ ಹೀಗಿದೆ. Islam has the solution to the problems of human kind ಮನುಕುಲದ ಸಮಸ್ಯೆಗಳಿಗೆ ಇಸ್ಲಾಮಿನಲ್ಲಿ ಪರಿಹಾರವಿದೆ ಎಂದಾಗಿದೆ. ಮುಸ್ಲಿಮರಲ್ಲಿ ಮಾನಸಿಕ ಖಿನ್ನತೆ ಕಡಿಮೆಯಿರಲು ಕಾರಣ ಅಲ್ಲಾಹನ ಸ್ಮರಣೆಯಾಗಿದೆ.
ಕುರ್ ಆನಿನ 13ನೇ ಅಧ್ಯಾಯ ಅರ್ರಅದ್ 28ನೇ ಸೂಕ್ತದಲ್ಲಿ ಅಲ್ಲಾಹು ಹೇಳುತ್ತಾನೆ. ‘‘ಸತ್ಯ(ದಲ್ಲಿ) ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಃಶಾಂತಿ ಹೊಂದಿದವರು. ತಿಳಿಯಿರಿ! ಮನಸ್ಸುಗಳು ಶಾಂತವಾಗುವುದು ಅಲ್ಲಾಹನ ಸ್ಮರಣೆಯಿಂದಲೇ’’. ಎಲ್ಲಾ ಸಮಸ್ಯೆಗಳಿಗೆ ಕುರ್ ಆನ್ ಪರಿಹಾರವಾಗಿದೆ. Quran the path to happiness. ಕುರ್ ಆನ್ ಸಂತೋಷದ ಮಾರ್ಗವಾಗಿದೆ. ಪ್ರತಿಯೊಂದು ಪ್ರತಿಕೂಲ ಸನ್ನಿವೇಶದಲ್ಲೂ ಮುಸ್ಲಿಮನಾದವನು ಸಹನೆ ವಹಿಸುತ್ತಾನೆ. ಇಹಲೋಕವು ಕ್ಷಣಿಕ ಮತ್ತು ಪರಲೋಕವು ಶಾಶ್ವತವಾಗಿದೆ ಎಂಬ ವಿಶ್ವಾಸ ಮುಸ್ಲಿಮರಿಗಿದೆ. ಜರ್ಮನಿಯ ಮನೋಶಾಸ್ತ್ರಜ್ಞರು ಮಾಡಿದ ಸಮೀಕ್ಷೆಯ ಪ್ರಕಾರ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಅವರ ಸಂತೋಷ ಮತ್ತು ಸಂತೃಪ್ತಿಯ ಮಟ್ಟ ಇತರರಿಗಿಂತ ಅತ್ಯುನ್ನತವಾಗಿದೆ.
ಆತ್ಮಹತ್ಯೆಯನ್ನು ಹೇಗೆ ತಡೆಯಬಹುದು
ನಮ್ಮ ಸ್ನೇಹಿತ, ಸಂಬಂಧಿಕ ಅಥವಾ ಇತರ ಯಾವನೇ ವ್ಯಕ್ತಿ ದುಃಖದಲ್ಲಿದ್ದರೆ, ಕಷ್ಟದಲ್ಲಿದ್ದರೆ ಅವನ ನೋವಿನಲ್ಲಿ ಪಾಲ್ಗೊಂಡು ವಿಚಾರಿಸಬೇಕು. ಇದರಿಂದ ಅವನೊಂದಿಗೆ ಹತ್ತಿರದ ಸಂಪರ್ಕ ಸಾಧ್ಯವಾಗಿ ನೀನು ಕಷ್ಟದಲ್ಲಿದ್ದಿಯೇ? ಏನು ಸಮಸ್ಯೆ? ಬದುಕುವುದೇ ಬೇಡವೆಂಬ ಆಲೋಚನೆ ಬರುತ್ತಿದೆಯಾ? ಮುಂತಾದ ಪ್ರಶ್ನೆಗಳನ್ನು ಕೇಳಲು ಅವಕಾಶ ಸಿಗುತ್ತದೆ. ಆತ್ಮಹತ್ಯೆ ಹಠಾತ್ ಪ್ರವೃತ್ತಿಯಲ್ಲ. ಆತ್ಮಹತ್ಯೆ ಮಾಡುವವರು ಹಲವು ಬಾರಿ ಯೋಚನೆ ಮಾಡಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಸಂದರ್ಭ ಕೂಡಿ ಬಂದಾಗ ಅವರು ತಾವು ಹಾಕಿದ ಯೋಜನೆ ಪ್ರಕಾರ ಆತ್ಮಹತ್ಯೆಗೆ ಶರಣಾಗುತ್ತಾರೆ.
ಜಗತ್ತಿನ ಹಲವು ಕಡೆ ಆತ್ಮಹತ್ಯೆಯ ಬಗ್ಗೆ ಅಧ್ಯಯನ ನಡೆದಿತ್ತು. ಅವರ ಕುಟುಂಬದವರೊಂದಿಗೆ ವಿಚಾರಿಸಿದಾಗ ಹೌದು ಅವನು ಈ ಮೊದಲು 2-3 ಸಲ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಮ್ಮೊಂದಿಗೆ ಹೇಳುತ್ತಿದ್ದ ಎಂಬುದು ಅವರ ಉತ್ತರವಾಗಿತ್ತು. ಯಾರಾದರೂ ಆತ್ಮಹತ್ಯೆ ಮಾಡುತ್ತೇನೆಂದು ಹೇಳಿದರೆ, ಹೇ ನೀನು ಸುಮ್ಮನೆ ಹೇಳಬೇಡ. ಮಾಡುವುದಾದರೆ ಮಾಡಿಕೋ ಎಂದು ಅವರಿಗೆ ಸವಾಲು ಹಾಕಬಾರದು. ಆತ್ಮಹತ್ಯೆ ಮಾಡುತ್ತೇನೆಂದು ಹೇಳುವವರು ತುಂಬಾ ಸಮಸ್ಯೆಯಲ್ಲಿರುವವರು. ಅದು ಅವರ ನೋವಿನ ಕೂಗು, ಆ ಕೂಗಿನ ಅರ್ಥ ಪರೋಕ್ಷವಾಗಿ ನನಗೆ ಸಹಾಯ ಮಾಡಿ ಎಂದಾಗಿದೆ. ಅಂತಹ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡಬೇಕು. ಆತ್ಮಹತ್ಯೆ ಮಾಡುವವರು, ಮಾಡಿದವರು ಎಲ್ಲರೂ ಮಾನಸಿಕ ಅಸ್ವಸ್ಥರಲ್ಲ. ಕೌಟುಂಬಿಕ, ಸಾಮಾಜಿಕ, ಮಾನಸಿಕ ಖಿನ್ನತೆ ಮುಂತಾದವುಗಳಿಂದಾಗಿ ಆತ್ಮಹತ್ಯೆ ಮಾಡುತ್ತಾರೆ.
ಒಬ್ಬ ವ್ಯಕ್ತಿಯು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದರೆ, ಅವನು ಎಂದಿಗೂ ಮತ್ತೆ ಆತ್ಮಹತ್ಯೆಗೆ ಪ್ರಯತ್ನ ಮಾಡುವುದಿಲ್ಲ ಎಂಬುದು ಸುಳ್ಳು. ಅಂತಹವರನ್ನು ಮನೋವೈದ್ಯರಲ್ಲಿಗೆ ಕರಕೊಂಡು ಹೋಗಿ, ಅವರ ಸಮಸ್ಯೆಯನ್ನು ಪತ್ತೆ ಹಚ್ಚಿ, ಅವರಿಗೆ ಚಿಕಿತ್ಸೆಯನ್ನು ನೀಡಬೇಕು ಮತ್ತು ಎಂದಿಗೂ ಅವರನ್ನು ಒಬ್ಬಂಟಿಯಾಗಿ ಬಿಡಬಾರದು.
ಆತ್ಮಹತ್ಯೆ ಮಾಡುವ ಮುಂಚೆ ಅವರು ಕೆಲವು ಸೂಚನೆಗಳನ್ನು ಕೊಡುತ್ತಾರೆ. ಯಾವಾಗಲೂ ಅಳುತ್ತಿರುವುದು, ನಾನು ಯಾಕಾಗಿ ಬದುಕಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಪದೇ ಪದೇ ಕ್ಷಮೆ ಕೇಳುತ್ತಿರುವುದು, ಅವರಿಗೆ ತುಂಬಾ ಇಷ್ಟವಿರುವ ವಸ್ತುಗಳನ್ನು ಇತರರಿಗೆ ನೀಡಿ ಇದನ್ನು ಜೋಪಾನವಾಗಿಡಿ ಎಂದು ಹೇಳುವುದು ಮುಂತಾದವುಗಳು. ಇಂತಹವರ ಬಗ್ಗೆ ನಾವು ನಿಗಾವಹಿಸಬೇಕು. ಆತ್ಮಹತ್ಯೆಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಕೈಜೋಡಿಸಿ ಪ್ರಯತ್ನ ಮಾಡಿದರೆ ಎಷ್ಟೋ ಜೀವಗಳನ್ನು ಉಳಿಸಬಹುದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರೊಂದಿಗೆ ಮಾತಾಡಿ ಅವರ ಸಮಸ್ಯೆಗಳನ್ನು ಅರಿತು ಅವರಿಗೆ ಬೇಕಾದ ಸಹಾಯ ಮಾಡಬೇಕು. ಮೊದಲು ಆತ್ಮಹತ್ಯೆಗೆ ಪ್ರಯತ್ನ ಮಾಡಿದವರಿಗೆ ಚಿಕಿತ್ಸೆ ನೀಡಲು ವೈದ್ಯರು ಹೆದರುತ್ತಿದ್ದರು. ಆದರೆ ಈಗ ಮೆಂಟಲ್ ಹೆಲ್ತ್ ಕೇರ್ ಆಕ್ಟ್ 2018ರ ಪ್ರಕಾರ ಆತ್ಮಹತ್ಯೆಗೆ ಮಾಡುವ ಪ್ರಯತ್ನ ಅಪರಾಧವಲ್ಲ. ಆತ್ಮಹತ್ಯೆಗೆ ಪ್ರಯತ್ನ ಮಾಡಿದವರಿಗೆ ಶಿಕ್ಷೆ ಅಲ್ಲ, ಚಿಕಿತ್ಸೆ ನೀಡಬೇಕೆಂದು ಈ ಕಾಯ್ದೆ ಹೇಳುತ್ತದೆ.
ಆತ್ಮಹತ್ಯೆ ಮತ್ತು ಆತ್ಮಹತ್ಯಾ ಪ್ರಯತ್ನವು ಸಾಮಾಜಿಕ ಆರೋಗ್ಯದ ಸಮಸ್ಯೆಯಾಗಿದೆ, ಆತ್ಮಹತ್ಯೆಯನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.