ಸುಧಾಕರ್ ಸದನದಲ್ಲೇ ಕ್ಷಮೆ ಕೇಳಬೇಕು: ಬಿಜೆಪಿ ಶಾಸಕ ಹರ್ಷವರ್ಧನ್ ಆಗ್ರಹ

Prasthutha|

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬೌದ್ಧಧರ್ಮದ ಕುರಿತು ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಬಿಜೆಪಿ ಶಾಸಕ ಬಿ.ಹರ್ಷವರ್ಧನ್, ‘ಅವರು ಸದನದಲ್ಲೇ ಕ್ಷಮೆ ಕೇಳಬೇಕು. ವಿರೋಧ ಪಕ್ಷಗಳು ಇದರ ಕುರಿತು ಸದನದಲ್ಲಿ ಮಾತನಾಡಿದರೆ, ನಾನೂ ಅವರೊಂದಿಗೆ ಧ್ವನಿಗೂಡಿಸುತ್ತೇನೆ’ ಎಂದು ಆಗ್ರಹಿಸಿದ್ದಾರೆ.

- Advertisement -

ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹರ್ಷವರ್ಧನ್, “ರಕ್ತಪಾತವನ್ನು ನೋಡಿ ನೊಂದು ಸಾಮ್ರಾಟ್ ಅಶೋಕ ಬೌದ್ಧಧರ್ಮವನ್ನು ಸ್ವೀಕರಿಸಿದರು. ಬಳಿಕ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಅಷ್ಟು ಶ್ರೇಷ್ಟತೆ ಬೌದ್ಧಧರ್ಮಕ್ಕೆ ಇದೆ. ಹೀಗಾಗಿ ಬೌದ್ಧಧರ್ಮದ ಕುರಿತು ಅಷ್ಟು ಲಘುವಾಗಿ ಸಚಿವರು ಮಾತನಾಡಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ.

“ಭಾರತದ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರವು ಬೌದ್ಧ ಧರ್ಮದ ಸಂಕೇತ. ರಾಷ್ಟ್ರ ಲಾಂಛನವೂ ಬೌದ್ಧಧರ್ಮದ ಪ್ರೇರಣೆಯಿಂದ ಬಂದಿದೆ. ಇಂದು ನಾವು ಅದನ್ನೆಲ್ಲ ಅನುಸರಿಸುತ್ತಿದ್ದೇವೆ. ಬೌದ್ಧಧರ್ಮದಿಂದ ಹಾಗೆ ಆಗಿದೆ, ಹೀಗೆ ಆಗಿದೆ ಎಂದು ಏನೋ ಬಾಯಿ ಚಪಲಕ್ಕಾಗಿ ಸಚಿವರು ಏನೇನೋ ಮಾತನಾಡಬಾರದು. ಸಚಿವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರು ಕೂಡಲೇ ಕ್ಷಮಾಪಣೆ ಕೇಳಬೇಕು”. ಎಂದಿರುವ ಹರ್ಷವರ್ಧನ್ ಸಚಿವರಿಗೆ ಇತಿಹಾಸ ಪಾಠ ಮಾಡಿದ್ದಾರೆ.

- Advertisement -

ಚಿಕ್ಕಬಳ್ಳಾಪುರ ತಾಲ್ಲೂಕು ಬ್ರಾಹ್ಮಣರ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ‘ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Join Whatsapp