ಬೆಂಗಳೂರು : ರಾಜ್ಯದಲ್ಲಿ ಇಂದಿಗೆ(ಬುಧವಾರ, ಮೇ. 05) ಒಂದು ಕೋಟಿ ಡೋಸ್ ಲಸಿಕಾ ವಿತರಣೆ ಪೂರೈಸಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಕರ್ನಾಟಕ ಇಂದು 1 ಕೋಟಿ ಡೋಸ್ ಲಸಿಕೆ ವಿತರಣೆ ಪೂರೈಸಿದೆ. ಈವರೆಗೂ ಕೇಂದ್ರದಿಂದ ರಾಜ್ಯಕ್ಕೆ 1,05,49,970 ಡೋಸ್ ಲಸಿಕೆ ಲಭ್ಯವಾಗಿದ್ದು, ರಾಜ್ಯ ಸರ್ಕಾರ 3 ಲಕ್ಷ ಡೋಸ್ ತರಿಸಿಕೊಂಡಿದೆ. ಕೊರೊನಾ ವಿರುದ್ಧದ ಈ ಸಮರದಲ್ಲಿ ಲಸಿಕೆ ನಮ್ಮ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಪ್ರತಿಯೊಬ್ಬರಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಕೊರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಜನತೆ ಕಂಗಾಲಾಗಿದ್ದಾರೆ. ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯಗಳ ಅಭಾವ ರಾಜ್ಯವನ್ನು ಬಲವಾಗಿ ಕಾಡುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಆಮ್ಲಜನಕದ ಕೊರತೆ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಕಂಡುಬರುತ್ತಿವೆ.