ದಿಢೀರ್ ನಿವೃತ್ತಿ ಸುತ್ತೋಲೆಗೆ ಖಂಡನೆ; ತಾಲೂಕು ಪಂಚಾಯಿತಿ ಎದುರು ಬಿಸಿಯೂಟ ನೌಕರರ ಪ್ರತಿಭಟನೆ

Prasthutha|

ಹಾಸನ: ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ 60 ವರ್ಷ ಮೇಲ್ಪಟ್ಟ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರು ತಾಲೂಕು ಪಂಚಾಯಿತಿ ಎದುರು ಇಂದು ಪ್ರತಿಭಟನೆ ನಡೆಸಿದರು.

- Advertisement -

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರು ತಮ್ಮ ಜೀವ ಸವೆಸಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನದಲಿತ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಬಡಿಸುವುದರೊಂದಿಗೆ ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ಪರಿಶ್ರಮವಿದೆ.

ಆದರೆ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಹೊರತು ಪಡಿಸಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರಲಿಲ್ಲ. ಆದರೆ ಈಗ ವಯಸ್ಸಿನ ಕಾರಣ ನೀಡಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡಲಾಗಿದ್ದು, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

- Advertisement -

ರಾಜ್ಯದಲ್ಲಿ ಸುಮಾರು 11000 ದಿಂದ 12,000 ನೌಕರರ ಕೆಲಸವನ್ನು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೆ ತೆಗೆದುಹಾಕಲು ಸರ್ಕಾರ ಮುಂದಾಗಿರುವುದು ಖಂಡನೀಯ. ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆದು ಅಬಲರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ 60 ವರ್ಷ ವಯೋಮಾನದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ನೀಡಬೇಕು. ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಏಪ್ರಿಲ್ 10, 2022ಕ್ಕೆ ಮರು ಆದೇಶ ಮಾಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿರುವ 1000 ವೇತನವನ್ನು ಜನವರಿ 2022 ರಿಂದ ಅನ್ವಯಿಸಿ ಜಾರಿ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ, ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇಸ್ವರೂಪದ ಜವಾಬ್ದಾರಿ ಕೊಡಬಾರದು. ಶಿಕ್ಷಣ ಇಲಾಖೆಯ ಶಿಫಾರಸಿನಂತೆ ವೇತನ ಹೆಚ್ಚಳ ಮಾಡಬೇಕು. ಮಕ್ಕಳ ಅಪೌಷ್ಟಿಕತೆ ತಡೆ ಹಿಡಿಯಲು ಅನುಕೂಲವಾಗುವ ಮೊಟ್ಟೆ- ಬಾಳೆಹಣ್ಣನ್ನು ಎಲ್ಲಾ ಜಿಲ್ಲೆಗಳಿಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ನೌಕರರಾದ ರಂಗಮ್ಮ, ದೇವಮ್ಮ, ಕಾಮಾಕ್ಷಮ್ಮ, ನಾಗಮ್ಮ, ಭಾಗ್ಯಮ್ಮ,ಕರಿಯಮ್ಮ,ಈರಮ್ಮ, ಅರವಿಂದ್ ಮೊದಲಾದವರಿದ್ದರು.

Join Whatsapp