ಬಿಹಾರ: ಉಕ್ರೇನ್ ನಿಂದ ಭಾರತೀಯ ನಾಗರಿಕರನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಹೂವುಗಳನ್ನು ವಿತರಿಸುವುದು ಅರ್ಥಹೀನ ಎಂದು ಬಿಹಾರ ಮೋತಿಹಾರಿ ಮೂಲದ ದಿವ್ಯಾಂಶು ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿವ್ಯಾಂಶು ಸಿಂಗ್ ಎಂಬ ವಿದ್ಯಾರ್ಥಿ ಉಕ್ರೇನ್ ನಿಂದ ಹಂಗೇರಿ ಮೂಲಕ ಗುರುವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದಿದ್ದು ಅವರನ್ನು ಗುಲಾಬಿಯೊಂದಿಗೆ ಸ್ವಾಗತಿಸಲಾಗಿತ್ತು. ಈ ವೇಳೆ ಒಕ್ಕೂಟ ಸರ್ಕಾರವು ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತಿಲ್ಲ. ನೀವು ಕೊಡುವ ಗುಲಾಬಿ ಹೂವುಗಳಿಂದ ನಾನೇನು ಮಾಡಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾನೆ.
ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ನಿಮಗೆ ನೆರವು ಲಭಿಸಿದೆಯೇ ಎಂದು ಕೇಳಿದಾಗ, “ನಾವು ಹಂಗೇರಿಗೆ ಗಡಿ ದಾಟಿದ ನಂತರವೇ ನಮಗೆ ಸಹಾಯ ಸಿಕ್ಕಿತು. ಅದಕ್ಕೂ ಮೊದಲು ಯಾವುದೇ ಸಹಾಯ ಮಾಡಲಿಲ್ಲ, ನಾವು ಎಲ್ಲವನ್ನೂ ಸ್ವತಃ ಮಾಡಿಕೊಂಡಿದ್ದೇವೆ. ನಾವು ಹತ್ತು ಮಂದಿ ಗುಂಪುಗೂಡಿ ರೈಲು ಹತ್ತಿದ್ದೇವೆ. ರೈಲು ತುಂಬಿ ತುಳುಕುತ್ತಿತ್ತು’’ ಎಂದು ಸಿಂಗ್ ಹೇಳಿದರು.