►ಸೂಲಿಬೆಲೆಯ ಅರ್ಹತೆಯೇನು, ಪಠ್ಯ ಆಯ್ಕೆ ಮಾಡಿರುವ ಚಕ್ರತೀರ್ಥರ ಅರ್ಹತೆಯೇನು ಎಂದು ಪ್ರಶ್ನಿಸಿದ ಕಾಂಗ್ರೆಸ್
ಬೆಂಗಳೂರು: ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕ ಪರಿಷ್ಕರಣೆಯು ಬಲಪಂಥೀಯ ಚಿಂತನೆಗಳು ಮತ್ತು ಕೋಮು ಸಾಮರಸ್ಯಗಳನ್ನು ಕೆಡಹುವಂತಾಗಿದ್ದು ದಿನಕ್ಕೊಂದು ವಿವಾದವನ್ನು ಎಳೆದು ಹಾಕುತ್ತಿದೆ. ಬಿಜೆಪಿಯ ಕೂಲಿ ಭಾಷಣಗಾರ, ಸುಳ್ಳಿನ ಸರದಾರವೆಂದು ಕುಖ್ಯಾತಿ ಪಡೆದ ಚಕ್ರವರ್ತಿ ಸೂಲಿಬೆಲೆಯ ವಿಚಾರವನ್ನು ಪಠ್ಯದಲ್ಲಿ ಅಳವಡಿಸಿದ್ದನ್ನು ಉಲ್ಲೇಖಿಸಿ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ಸಿಗರು ಕಿಡಿಗಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ಘಟಕ, ” ಈ ಸರ್ಕಾರಕ್ಕೆ ಏನಾದರು ಬುದ್ಧಿ ಇದೆಯೇ? ಒಂದು ಕಡೆ ಬುದ್ಧ, ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್ ರಂತಹ ಮಹನೀಯರ ಪಠ್ಯಗಳನ್ನ ತೆಗೆದು ಹಾಕುತ್ತಾರೆ. ಇನ್ನೊಂದೆಡೆ ಆರ್ ಎಸ್ ಎಸ್ ನ ಹೆಡ್ಗೇವಾರ್, ಸುಳ್ಳಿನ ಸರಮಾಲೆಯನ್ನೇ ಸುತ್ತುತ್ತಾ, ಯುವಕರ ದಾರಿ ತಪ್ಪಿಸುತ್ತಾ ಇರುವ ಸೂಲಿಬೆಲೆಯಂತಹ ಅಯೋಗ್ಯರ ಪಠ್ಯಗಳನ್ನು ಅಳವಡಿಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಸುಳ್ಳು ಭಾಷಣ ಮಾಡಿ, ಸುಳ್ಳಿನಿಂದ ಹಣ ಮಾಡಿ, ಸುಳ್ಳಿನಿಂದಲೇ ಬದುಕುತ್ತಿರುವ ಸೂಲಿಬೆಲೆಯಿಂದ ನಮ್ಮ ಮಕ್ಕಳು ಯಾವ ಆದರ್ಶಗಳನ್ನು ಕಲಿಯಬೇಕು, ಈ ಸೂಲಿಬೆಲೆಯ ಅರ್ಹತೆಯೇನು, ಅವರ ಪಠ್ಯ ಆಯ್ಕೆ ಮಾಡಿರುವ ಚಕ್ರತೀರ್ಥರ ಅರ್ಹತೆಯೇನು, ಯಾವ ಅರ್ಹತೆಯ ಮೇಲೆ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದೀರಿ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.