ವಿದ್ಯಾರ್ಥಿಗಳು ಮತ್ತು ರಾಜಕಾರಣ

Prasthutha|

►ಇಂದು ಹುತಾತ್ಮ ದಿನ, ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ಹುತಾತ್ಮರಾದ ದಿನ. ಈ ಸಂದರ್ಭದಲ್ಲಿ ಭಗತ್ ಸಿಂಗ್ ವಿದ್ಯಾರ್ಥಿ ಯುವಸಮೂಹವನ್ನುದ್ದೇಶಿಸಿ ಬರೆದ ಪತ್ರ ಇಲ್ಲಿದೆ.

- Advertisement -

-ಭಗತ್ ಸಿಂಗ್(1928)

✍️ಅನುವಾದ : ನಾ ದಿವಾಕರ

- Advertisement -

( ಈ ಲೇಖನವನ್ನು ಒಂದು ಮುಖ್ಯ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಲು 1928ರ ಜುಲೈ ಮಾಸದ ಕೀರ್ತಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಆ ದಿನಗಳಲ್ಲಿ ಹಲವು ನಾಯಕರು ವಿದ್ಯಾರ್ಥಿಗಳಿಗೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿರುವಂತೆ ಕರೆ ನೀಡುತ್ತಿದ್ದರು. ಈ ಲೇಖನವನ್ನು ಆ ಕರೆಗೆ ಪ್ರತಿಕ್ರಿಯೆಯ ರೂಪದಲ್ಲಿ ಬರೆಯಲಾಗಿದೆ. ಭಗತ್ ಸಿಂಗ್ ಬರೆದ ಈ ಲೇಖನವನ್ನು ಸಂಪಾದಕೀಯ ಅಂಕಣದಲ್ಲಿ ಪ್ರಕಟಿಸಲಾಗಿತ್ತು. ವರ್ತಮಾನದ ಸಂದರ್ಭದಲ್ಲೂ ಪರಿಸ್ಥಿತಿ ಭಿನ್ನವಾಗಿ ಕಾಣುತ್ತಿಲ್ಲ. 1947ರಲ್ಲಿ ಭಾರತ ಬ್ರಿಟೀಷ್ ಆಳ್ವಿಕೆಯಿಂದ ವಿಮೋಚನೆ ಪಡೆದು ಸ್ವತಂತ್ರ ದೇಶವಾಗಿ ಅಧಿಕಾರ ಹಸ್ತಾಂತರ ಆಗಿದ್ದರೂ ಬೃಹತ್ ಕಾರ್ಪೋರೇಟ್ ಉದ್ಯಮಿಗಳು ಮತ್ತು ಊಳಿಗಮಾನ್ಯ ದೊರೆಗಳು ಜನರನ್ನು ಶೋಷಣೆಗೊಳಪಡಿಸುವ ವಿದ್ಯಮಾನವನ್ನು ಇಂದಿಗೂ ಕಾಣುತ್ತಿದ್ದೇವೆ. ಈಗಿನ ನಾಯಕರು ಮತ್ತು ಆಡಳಿತಗಾರರು ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತೀವ್ರತೆಯಿಂದ ರಾಜಕೀಯದಿಂದ ದೂರ ಉಳಿಯುವಂತೆ ಉಪದೇಶ ಮಾಡುತ್ತಿರುತ್ತಾರೆ. ಆದ್ದರಿಂದ, ಭಗತ್ ಸಿಂಗ್ ಅವರ ಈ ಲೇಖನ 1928ರಷ್ಟೇ ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಸನ್ನಿವೇಶಗಳಲ್ಲಿ ಈ ಲೇಖನವನ್ನು ಮರುಪ್ರಸಾರ ಮಾಡುವುದು ಅತ್ಯವಶ್ಯವಾಗಿದೆ )

-0-0-0-

ಇತ್ತೀಚಿನ ದಿನಗಳಲ್ಲಿ, ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ಯುವಜನತೆ (ವಿದ್ಯಾರ್ಥಿಗಳು) ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಕೂಡದು ಎಂಬ ಸದ್ದು ಹೆಚ್ಚಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ನಿಲುವು ವಿಶಿಷ್ಟವಾಗಿದೆ. ಅವರ ಪ್ರಕಾರ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸುವ ಮುನ್ನ, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಷರತ್ತು ವಿಧಿಸಿದೆ. ಈಗ ಶಿಕ್ಷಣ ಸಚಿವರಾಗಿರುವ ಚುನಾಯಿತ ಸದಸ್ಯರಾದ ಮನೋಹರ್ ಶಾಲಾ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿದ್ದು, ಯಾವುದೇ ವಿದ್ಯಾರ್ಥಿಗಳು ಅಥವಾ ಶಿಕ್ಷಕರು ರಾಜಕಾರಣದಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಿರುವುದು ದುರದೃಷ್ಟಕರ. ಲಾಹೋರ್ನಲ್ಲಿ ಇತ್ತೀಚೆಗೆ, ಕಳೆದ ವಾರದಲ್ಲಷ್ಟೇ ವಿದ್ಯಾರ್ಥಿ ಸಪ್ತಾಹವನ್ನು ಆಚರಿಸಲಾಗಿದೆ. ಅಲ್ಲಿಯೂ ಸಹ, ಸರ್ ಅಬ್ದುಲ್ ಖಾದರ್ ಮತ್ತು ಪ್ರೊ. ಈಶ್ವರಚಂದ್ರ ನಂದ ಅವರು ವಿದ್ಯಾರ್ಥಿಗಳು ರಾಜಕಾರಣದಲ್ಲಿ ಭಾಗವಹಿಸಕೂಡದು ಎಂಬ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಪಂಜಾಬ್ ರಾಜ್ಯ ದೇಶದಲ್ಲೇ ಅತ್ಯಂತ ಹಿಂದುಳಿದಿರುವ ರಾಜ್ಯವಾಗಿದೆ. ಇದಕ್ಕೆ ಕಾರಣವಾದರೂ ಏನು ? ಪಂಜಾಬ್ ಕಡಿಮೆ ತ್ಯಾಗ ಮಾಡಿದೆಯೇ ? ಅಥವಾ ಪಂಜಾಬ್ ಕಡಿಮೆ ಸಂಕಷ್ಟಗಳನ್ನು ಎದುರಿಸುತ್ತಿದೆಯೇ ? ಹಾಗಾದರೆ ಈ ವಲಯದಲ್ಲಿ ಪಂಜಾಬ್ ಹಿಂದುಳಿಯಲು ಕಾರಣವೇನು ? ಇಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಸಂಗತಿ ಎಂದರೆ ಶಿಕ್ಷಣ ಇಲಾಖೆಯಲ್ಲಿರುವ ನಮ್ಮ ಅಧಿಕಾರಿಗಳು ಮೂರ್ಖರು. ಪಂಜಾಬ್ ಕೌನ್ಸಿಲ್ನಲ್ಲಿ ಇಂದು ನಡೆದಿರುವ ನಡಾವಳಿಗಳನ್ನು ಗಮನಿಸಿದರೆ, ಈ ಹಿಂದುಳಿಯುವಿಕೆಗೆ ಮೂಲ ಕಾರಣ ನಮ್ಮ ಶಿಕ್ಷಣ ನಿರುಪಯುಕ್ತವಾಗಿದ್ದು, ವ್ಯರ್ಥವಾಗುತ್ತಿದೆ. ಹಾಗೂ ನಮ್ಮ ದೇಶಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ವಿದ್ಯಾರ್ಥಿ-ಯುವಜನತೆ ಪಾಲ್ಗೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಅವರು ಅಮಾಯಕರಾಗಿದ್ದಾರೆ. ತಮ್ಮ ವಿದ್ಯಾರ್ಜನೆ ಮುಗಿದ ನಂತರ ಕೆಲವರು ಉನ್ನತ ವ್ಯಾಸಂಗಕ್ಕಾಗಿ ಹೋಗುತ್ತಾರೆ ಆದರೆ ಅವರಾಡುವ ಮಾತುಗಳನ್ನು ಗಮನಿಸಿದರೆ ಯಾರಿಗೇ ಆದರೂ ನಿರಾಸೆಯಾಗುವುದು ನಿಶ್ಚಿತ. ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸಬೇಕಾದ ಯುವಜನತೆಯನ್ನು ಪ್ರಜ್ಞಾಶೂನ್ಯರನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮ ಏನಾಗುತ್ತದೆ, ಇದರಿಂದ ನಾವೇನು ಪಡೆಯುತ್ತೇವೆ ಎನ್ನುವುದನ್ನು ನಾವೇ ಅರ್ಥಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿಗಳ ಮುಖ್ಯ ಆದ್ಯತೆ ಅಧ್ಯಯನ ಮಾಡುವುದು ಎನ್ನುವುದು ನಮಗೆ ಅರ್ಥವಾಗುತ್ತದೆ, ಅವರು ತಮ್ಮ ವಿದ್ಯಾಭ್ಯಾಸಕ್ಕೆ ಸಂಪೂರ್ಣವಾಗಿ ಗಮನ ನೀಡಬೇಕಾದುದೂ ಹೌದು. ಆದರೆ ನಮ್ಮ ದೇಶ ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಶಿಕ್ಷಣದ ಒಂದು ಭಾಗವೇ ಅಲ್ಲವೇ ? ಇಲ್ಲವಾದರೆ, ನಮ್ಮ ದೃಷ್ಟಿಯಲ್ಲಿ ಈ ಶಿಕ್ಷಣ ಕೇವಲ ಗುಮಾಸ್ತಗಿರಿಯ ಕೌಶಲ್ಯವನ್ನು ಗಳಿಸುವ ಒಂಧು ಮಾರ್ಗವಾಗಿ ವ್ಯರ್ಥವಾಗಿ ಕಾಣುತ್ತದೆ. ಈ ರೀತಿಯ ಶಿಕ್ಷಣದಿಂದ ಏನು ಉಪಯೋಗ ? ಕೆಲವು ಕುತಂತ್ರಿ ಜನಗಳು “ ಮಕ್ಕಳೇ ನೀವು ರಾಜಕೀಯವಾಗಿ ಓದಬೇಕು ಮತ್ತು ಆಲೋಚನೆ ಮಾಡಬೇಕು, ಆದರೆ ರಾಜಕಾರಣದಲ್ಲಿ ಭಾಗವಹಿಸಬಾರದು, ಒಮ್ಮೆ ನೀವು ಹೆಚ್ಚಿನ ವಿದ್ಯಾರ್ಹತೆ ಪಡೆದರೆ, ನೀವು ನಮ್ಮ ದೇಶಕ್ಕೆ ಉಪಯುಕ್ತವಾಗುವಿರಿ ” ಎಂದು ಹೇಳುತ್ತಾರೆ.

ಮೇಲ್ನೋಟಕ್ಕೆ ಇದು ಚೆಂದವಾಗಿ ಕಾಣುತ್ತದೆ ಆದರೆ ನಾವು ಇದನ್ನೂ ಅಲ್ಲಗಳೆಯುತ್ತೇವೆ ಏಕೆಂದರೆ ಈ ಮಾತುಗಳನ್ನು ಅಲಂಕಾರಿಕವಾಗಿ ಆಡಲಾಗುತ್ತದೆ. ಈ ಒಂದು ಘಟನೆಯಿಂದ ಇದು ಸ್ಪಷ್ಟವಾಗುತ್ತದೆ. ಒಂದು ದಿನ ವಿದ್ಯಾರ್ಥಿಯೊಬ್ಬ ಪ್ರಿನ್ಸ್ ಕ್ರೊಪೋಟ್ಕಿನ್ ಬರೆದಿರುವ “ ಅಪೀಲ್ ಟು ದಿ ಯಂಗ್ ” (ಯುವಜನತೆಗೆ ಮನವಿ) ಪುಸ್ತಕವನ್ನು ಓದುತ್ತಿದ್ದ. ಇದನ್ನು ಕಂಡ ಪ್ರೊಫೆಸರ್ ಒಬ್ಬರು ಇದು ಯಾವ ರೀತಿಯ ಪುಸ್ತಕ ಎಂದು ಕೇಳುತ್ತಾರೆ. ಕೃತಿಕಾರರ ಹೆಸರು ಆತ ಬಂಗಾಲಿ ಎಂದು ಸೂಚಿಸುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿ ಪ್ರಿನ್ಸ್ ಕ್ರೋಪೋಟ್ಕಿನ್ ಒಬ್ಬ ಪ್ರಸಿದ್ಧ ಲೇಖಕನೆಂದೂ, ಅರ್ಥಶಾಸ್ತ್ರದ ವಿದ್ವಾಂಸರೆಂದೂ, ಪ್ರತಿಯೊಬ್ಬ ಪ್ರಾಧ್ಯಾಪಕರು ಇದನ್ನು ಓದಬೇಕೆಂದೂ ಹೇಳುತ್ತಾನೆ. ಹಾಗೆಯೇ ತನ್ನ ಪ್ರಾಧ್ಯಾಪಕರ ದಕ್ಷತೆಯನ್ನು ನೆನೆದು ನಗುತ್ತಾನೆ. ಅನಂತರ ಈ ಕೃತಿಯ ಲೇಖಕ ರಷಿಯಾದವರು ಎಂದೂ ಹೇಳುತ್ತಾನೆ. ಕೂಡಲೇ ಕ್ರೋಧದಿಂದ ಪ್ರತಿಕ್ರಯಿಸುವ ಪ್ರಾಧ್ಯಾಪಕನು “ ನೀನು ಬೋಲ್ಷೆವಿಕ್ ಏಕೆಂದರೆ ನೀನು ರಾಜಕೀಯ ಪುಸ್ತಕಗಳನ್ನು ಓದುತ್ತಿರುವೆ ” ಎಂದು ಹೇಳುತ್ತಾನೆ. ಬಾಲಕನಿಗೆ ರಷ್ಯಾದ ಸಿಡಿಲು ಬಡಿದಂತೆ ಭಾಸವಾಗುತ್ತದೆ. ಈ ಪ್ರಾಧ್ಯಾಪಕರ ದಕ್ಷತೆಯನ್ನು ನೋಡಿ ! ಇಂಥವರಿಂದ ಅಸಹಾಯಕ ವಿದ್ಯಾರ್ಥಿಗಳು ಏನು ಕಲಿಯಲು ಸಾಧ್ಯ ? ಈ ಪರಿಸ್ಥಿತಿಯಲ್ಲಿ ನಮ್ಮ ಯುವ ಜನತೆ ಏನನ್ನು ಕಲಿಯಲು ಸಾಧ್ಯ ?

ಎರಡನೆಯ ವಿಚಾರ ಎಂದರೆ : ರಾಜಕಾರಣದಲ್ಲಿ ಭಾಗವಹಿಸುವುದು ಎಂದರೇನು ? ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಮುಂತಾದವರ ಭಾಷಣಗಳನ್ನು ಆಲಿಸುವುದು ಮತ್ತು ಸ್ವಾಗತಿಸುವುದು ರಾಜಕಾರಣದಲ್ಲಿ ಭಾಗವಹಿಸಿದಂತಾಗುತ್ತದೆ. ಆದರೆ ಒಂದು ಆಯೋಗವನ್ನು, ಒಬ್ಬ ವೈಸರಾಯನನ್ನು ಸ್ವಾಗತಿಸುವುದನ್ನು ಹೀಗೆ ಭಾವಿಸಲಾಗುವುದೇ ? ಇದು ರಾಜಕಾರಣದ ಮತ್ತೊಂದು ಮಜಲು ಅಲ್ಲವೇ ? ಸರ್ಕಾರಕ್ಕೆ ಸಂಬಂಧಿಸಿದ ಮತ್ತು ದೇಶದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ರಾಜಕಾರಣ ಎಂದು ಭಾವಿಸುವುದಾದರೆ ಅದೂ ರಾಜಕಾರಣವೇ ಅಲ್ಲವೇ ? ಆದರೆ ಮೊದಲನೆಯದು ಸರ್ಕಾರವನ್ನು ಸಂತುಷ್ಟಗೊಳಿಸುತ್ತದೆ, ಎರಡನೆಯ ಕ್ರಿಯೆ ಸರ್ಕಾರಕ್ಕೆ ಕೋಪ ತರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿ ಪ್ರಶ್ನೆ ಇರುವುದು ಸರ್ಕಾರಕ್ಕೆ ನಮ್ಮ ಚಟುವಟಿಕೆಗಳು ಸಂತೋಷ ಉಂಟುಮಾಡುವುದೋ ಅಥವಾ ಅದರಿಂದ ಸರ್ಕಾರಕ್ಕೆ ಕೋಪ ಬರುವುದೋ ಎನ್ನುವುದು. ಹಾಗಾದಲ್ಲಿ ವಿದ್ಯಾರ್ಥಿಗಳಿಗೆ ಬಾಲ್ಯಾವಸ್ಥೆಯಿಂದಲೇ ಚಮಚಾಗಿರಿ ಮಾಡುವುದನ್ನು ಕಲಿಸಬೇಕೇ ? ಭಾರತವನ್ನು ವಿದೇಶಿ ದರೋಡೆಕೋರರು ಆಳುತ್ತಿರುವವರೆಗೂ ಅವರಿಗೆ ನಿಷ್ಠೆ ತೋರುವವರನ್ನು ನಾವು ವಿಶ್ವಾಸ ದ್ರೋಹಿಗಳು ಎಂದೇ ಪರಿಗಣಿಸಬೇಕಾಗುತ್ತದೆ. ಅವರು ಜೀವನೋಪಾಯಕ್ಕಾಗಿ ಗುಲಾಮರಾಗಿರುವವರು ಎಂದೂ, ಅವರನ್ನು ಮನುಷ್ಯರೇ ಅಲ್ಲವೆಂದೂ ಪರಿಗಣಿಸಬೇಕಾಗುತ್ತದೆ. ಹೀಗಿರುವಾಗ, ನಾವು ವಿದ್ಯಾರ್ಥಿಗಳಿಗೆ ನಿಷ್ಠೆಯ ಪಾಠವನ್ನು ಬೋಧಿಸುವುದು ಹೇಗೆ ಸಾಧ್ಯ ?

ಈ ಹೊತ್ತಿನ ಭಾರತಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರದ್ಧೆ ಮತ್ತು ಬದ್ಧತೆಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತಹ ದೇಶಭಕ್ತರ ಅವಶ್ಯಕತೆ ಇದೆ ಎನ್ನುವುದನ್ನು  ಎಲ್ಲರೂ ಒಪ್ಪುತ್ತಾರೆ. ಈ ದೇಶದ ಹಿರಿಯ ವಯಸ್ಕರ ನಡುವೆ ಇಂತಹವರನ್ನು ಕಾಣಲು ಸಾಧ್ಯವೇ ? ತಮ್ಮ ಕುಟುಂಬದ ಜಂಜಾಟಗಳು ಮತ್ತು ಲೌಕಿಕ ಬದುಕಿನ ಲೋಲುಪತೆಗಳಲ್ಲಿ ಮುಳುಗಿರುವ ಜನರ ನಡುವೆ ಇಂತಹವರನ್ನು ಗುರುತಿಸಲು ಸಾಧ್ಯವೇ ? ಇಂತಹ ದೇಶಭಕ್ತರನ್ನು ನಾವು ಕಾಣುವುದೇ ಆದರೆ ಈ ಯಾವುದೇ ಜಂಜಾಟಗಳಲ್ಲಿ ಸಿಲುಕದಿರುವ ಯುವಪೀಳಿಗೆಯಲ್ಲಿ ಮಾತ್ರ ಕಾಣಲು ಸಾಧ್ಯ. ಇಂತಹ ಯಾವುದೇ ಸಿಕ್ಕುಗಳಿಗೆ ಸಿಲುಕುವ ಮುನ್ನವೇ, ಕೊಂಚ ಮಟ್ಟಿಗಾದರೂ ವಾಸ್ತವಿಕತೆಯ ಪರಿಜ್ಞಾನವನ್ನು ಹೊಂದಿದ್ದರೆ, ವಿದ್ಯಾರ್ಥಿಗಳು ಮತ್ತು ಯುವ ಜನತೆ ಈ ದಿಕ್ಕಿನಲ್ಲಿ ಯೋಚಿಸಬಹುದು. ಗಣಿತ ಶಾಸ್ತ್ರ ಮತ್ತು ಭೂಗೋಳ ಶಾಸ್ತ್ರವನ್ನು ಓದಿ, ಪುನರ್ ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಸಾಕಾಗುವುದಿಲ್ಲ.

ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳನ್ನು ತೊರೆದು ಯುದ್ಧಭೂಮಿಗೆ ಹೊರಟಿದ್ದು ರಾಜಕಾರಣ ಅಲ್ಲವೇ ? ಆ ಸಂದರ್ಭದಲ್ಲಿ ಇಲ್ಲಿ ಉಪದೇಶ ನೀಡುವವರು ಎಲ್ಲಿದ್ದರು, ಆ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರೆಸಲು ಏಕೆ ಹೇಳಲು ಮುಂದಾಗಲಿಲ್ಲ ? ಬಾರ್ದೋಲಿ ಸತ್ಯಾಗ್ರಹಿಗಳಿಗೆ ನೆರವು ನೀಡುತ್ತಿರುವ ಅಹಮದಾಬಾದ್ ನ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳೇನು ಮೂರ್ಖರೇ ? ಇವರಿಗೆ ಹೋಲಿಸಿದರೆ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಷ್ಟು ಪ್ರಬುದ್ಧರಾಗುತ್ತಾರೆ ನೋಡೋಣ.  ಈಗ ವಿಮೋಚನೆ ಪಡೆದು ಸ್ವತಂತ್ರವಾಗಿರುವ ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯುವಲ್ಲಿ ವಿದ್ಯಾರ್ಥಿ-ಯುವಜನತೆಯ ಕೊಡುಗೆ ಸಾಕಷ್ಟಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ದೂರ  ಉಳಿಯುವ ಮೂಲಕ ಭಾರತದ ವಿದ್ಯಾರ್ಥಿ-ಯುವ ಸಮೂಹ ತಮ್ಮ ಸ್ವಾರ್ಥಕ್ಕಾಗಿಯೇ ಬದುಕುತ್ತಾರೆಯೇ ? 1919ರಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯವನ್ನು ಯುವ ಸಮೂಹ ಮರೆಯಲಾಗುವುದಿಲ್ಲ. ನಮಗೆ ಕ್ರಾಂತಿ ಅತ್ಯವಶ್ಯವಾಗಿದೆ ಎನ್ನುವುದನ್ನೂ ಅವರು ಅರಿತಿದ್ದಾರೆ. ಹೌದು, ಅವರು ವಿದ್ಯಾರ್ಜನೆ, ವ್ಯಾಸಂಗ ಮುಂದುವರಿಸಬೇಕು, ಖಂಡಿತವಾಗಿಯೂ ಹೌದು ! ಆದರೆ ಇದರೊಟ್ಟಿಗೇ ಅವರಿಗೆ ರಾಜಕೀಯ ಜ್ಞಾನವೂ ಅತ್ಯವಶ್ಯ. ಅಗತ್ಯ ಕಂಡುಬಂದಾಗ ಅವರು ಕದನ ಕಣಕ್ಕೆ ಧುಮುಕಲು ಹಿಂಜರಿಯಕೂಡದು. ಈ ಕಾರ್ಯಕ್ಕೆ ತಮ್ಮ ತನುಮನ ಅರ್ಪಿಸಲು ಹಿಂಜರಿಯಕೂಡದು. ತಮ್ಮ ಜೀವ ತ್ಯಾಗ ಮಾಡಲು ಹಿಂದೇಟು ಹಾಕಬಾರದು. ಈ ಪರಿಸ್ಥಿತಿಯನ್ನು ಕಾಪಾಡಲು ಅನ್ಯ ಮಾರ್ಗವೂ ಇಲ್ಲ.

Join Whatsapp