ಉಡುಪಿ: ಕುಂದಾಪುರದಲ್ಲಿ ಸ್ಕಾರ್ಫ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿಯೇ ತಡೆದು ನಿಲ್ಲಿಸಿದ ಸರಕಾರಿ ಕಾಲೇಜಿನ ಪ್ರಾಂಶುಪಾಲರ ಪಕ್ಷಪಾತಿ ಧೋರಣೆಗೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಕಾರ್ಫ್ ಧರಿಸಿ ಬಂದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಗೇಟ್ ಬಳಿ ತಡೆದು ಮಾನಸಿಕ ಹಿಂಸೆ ನೀಡಿರುವ ಕಾಲೇಜು ಪ್ರಾಂಶುಪಾಲರ ವರ್ತನೆ ಅಮಾನುಷವಾಗಿದೆ. ಹದಿಹರೆಯದ ಹೆಣ್ಮಕ್ಕಳನ್ನು ಕಡುಬಿಸಿಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಲಾಗಿದ್ದು, ಮನುಷ್ಯತ್ವವಿರುವ ಯಾರಿಂದಲೂ ಇಂತಹ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ನಿರಾಕರಿಸಿದ ಘಟನೆ ಇನ್ನೂ ಜೀವಂತವಾಗಿರುವಾಗಲೇ ಇಂದು ಕುಂದಾಪುರದಲ್ಲಿ ನಡೆದಿರುವ ಘಟನೆ ಕಳವಳಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವಸ್ತ್ರ ಸಂಹಿತೆಯ ನಿಯಮವಿಲ್ಲದಿದ್ದರೂ, ಉಡುಪಿ ಸಚಿವರು ಮತ್ತು ಸ್ಥಳೀಯ ಶಾಸಕರು ರಾಜಕೀಯ ಲಾಭಕ್ಕಾಗಿ ಹಸ್ತಕ್ಷೇಪ ನಡೆಸುತ್ತಿರುವುದು ಬಹಳ ಸ್ಟಷ್ಟವಾಗಿದೆ. ಮತೀಯವಾದಿ ಶಕ್ತಿಗಳು ಕೆಲವು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕೇಸರಿ ಶಾಲು ಹಾಕಿಸಿ ಕಾಲೇಜಿನಲ್ಲಿ ವಿವಾದ ಸೃಷ್ಟಿಸಿದ ಮಾತ್ರಕ್ಕೆ ಸ್ಕಾರ್ಫ್ ನಿಷೇಧಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸ್ಕಾರ್ಫ್ ಧರಿಸುವುದು ಮುಸ್ಲಿಮ್ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕು. ಇದನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಗುಡುಗಿದರು.
ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತೊಡಕುಂಟು ಮಾಡುವ ಸಮಾಜಘಾತುಕ ಶಕ್ತಿಗಳ ಯಾವುದೇ ಷಡ್ಯಂತ್ರಗಳನ್ನು ಸಹಿಸುವುದಿಲ್ಲ ಮತ್ತು ಎನ್.ಡಬ್ಲ್ಯು.ಎಫ್ ಅವರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ. ಸಾಂವಿಧಾನದ ಮೇಲೆ ಹಾಗೂ ದೇಶದ ಬಹುತ್ವ ಸಂಸ್ಕೃತಿಯ ಮೇಲೆ ನಂಬಿಕೆ ಇಟ್ಟಿರುವ ನಾಡಿನ ಎಲ್ಲಾ ಮಹಿಳಾ ಸಂಘಟನೆಗಳು ಮುಸ್ಲಿಮ್ ವಿದ್ಯಾರ್ಥಿನಿಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಬೇಕು. ಅದೇ ರೀತಿ ಅವರ ನ್ಯಾಯಯುತ ಹೋರಾಟದೊಂದಿಗೆ ಕೈಜೋಡಿಸಲು ಮುಂದೆ ಬರಬೇಕೆಂದು ಫರ್ಝಾನಾ ಮುಹಮ್ಮದ್ ಮನವಿ ಮಾಡಿದ್ದಾರೆ.