ಶಾಲೆಯ ಹೆಸರು ಕೆಡಿಸಲು ಮಾಡಿದ ಷಡ್ಯಂತ್ರ: ಪ್ರತ್ಯಾರೋಪ
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಖಾಸಗಿ ಶಾಲೆಯೊಂದರಿಂದ ವಿದ್ಯಾರ್ಥಿಯನ್ನು ಹೊರ ಹಾಕಲಾಗಿದೆ ಎಂದು ಪೋಷಕರೊಬ್ಬರು ಆರೋಪಿಸಿದ್ದು, ಇದು ಶಾಲೆಯ ಹೆಸರನ್ನು ಕೆಡಿಸಲು ಕೆಲವರು ಮಾಡಿದ ಷಡ್ಯಂತರವಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಪ್ರತ್ಯಾರೋಪ ಮಾಡಿದ್ದಾರೆ.
ಶ್ರೀ ಕೃಷ್ಣಾ ವಿದ್ಯಾಮಂದಿರದ ಶಾಲಾ ಮಳಿಗೆಯಿಂದ ನೋಟ್ ಪುಸ್ತಕ ಖರೀದಿಸಲು ನಿರಾಕರಿಸಿದ ಕಾರಣಕ್ಕೆ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಕೃಷ್ಣನನ್ನು ಶಾಲೆಯಿಂದ ಹೊರಗೆ ಕಳಿಸಲಾಗಿದೆ ಎಂದು ವಿದ್ಯಾರ್ಥಿಯ ತಂದೆ ವಿಜಯ ಆರೋಪಿಸಿದರು. ಶಾಲೆಯಲ್ಲಿ ದುಬಾರಿ ಬೆಲೆ ಹಿನ್ನೆಲೆಯಲ್ಲಿ ಹೊರಗಿನಿಂದ ನೋಟ್ ಪುಸ್ತಕ ಖರೀದಿಸಲು ಮುಂದಾಗಿದ್ದು, ಇದರಿಂದ ಮಗನನ್ನು ಶಾಲೆಯಿಂದ ಹೊರಹಾಕಲಾಗಿದ್ದು, ಈ ಕುರಿತು ಮುಖ್ಯ ಶಿಕ್ಷಣಾಧಿಕಾರಿಗೆ ದೂರು ನೀಡಿರುವುದಾಗಿ ತಿಳಿಸಿದರು.
ಶಾಲೆಯ ಹೆಸರು ಕೆಡಿಸಲು ನಡೆಸಿದ ಷಡ್ಯಂತ್ರ:
ಶಾಲೆಯ ನಿಯಮಗಳ ಬಗ್ಗೆ 16 ರಂದೇ ಪೋಷಕರ ಸಭೆ ನಡೆದಿತ್ತು. ಈ ನಿಯಮಗಳ ಪ್ರಕಾರ ಸಮವಸ್ತ್ರ, ಪುಸ್ತಕ ಸೇರಿದಂತೆ ಎಲ್ಲವೂ ಶಾಲೆಯಿಂದಲೇ ಖರೀದಿಸಲು ಎಲ್ಲಾ ಪೋಷಕರು ಒಪ್ಪಿದ್ದರು. ಇದೀಗ ಸಿದ್ದಾಪುರದ ಇಬ್ಬರು ಪತ್ರಕರ್ತರು ಸೇರಿ ಷಡ್ಯಂತ್ರ ನಡೆಸಿ ವಿದ್ಯಾರ್ಥಿಯ ತಂದೆಯ ಮೂಲಕ ಶಾಲೆಯ ಹೆಸರನ್ನು ಕೆಡಿಸಲು ಮುಂದಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯರಾದ ರಸಿತಾ ರಾಜೀವನ್ ಆರೋಪಿಸಿದರು.
ಶಾಲೆಯ ಪರ ನಿಂತ ಇತರ ಪೋಷಕರು: ಶ್ರೀ ಕೃಷ್ಣಾ ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣದ ಜೊತೆಗೆ ಶಾಲೆಯಲ್ಲಿ ಒಳ್ಳೆಯ ವಾತಾವರಣ ಇದೆ. ಪೋಷಕರ ಸಭೆಯಲ್ಲಿ ಶಾಲೆಯ ನಿಯಮಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಇದೀಗ ಶಾಲೆಯ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಇತರ ಕೆಲವು ಪೋಷಕರು ಮಾಧ್ಯಮಕ್ಕೆ ತಿಳಿಸಿದರು.