ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಸ್ವಯಂ ಪ್ರಾಣ ಬಲಿ ನೀಡಿದ ವಿದ್ಯಾರ್ಥಿ : ಹಾಸನದಲ್ಲೊಂದು ಹೃದಯವಿದ್ರಾವಕ ಘಟನೆ

Prasthutha|

ಹಾಸನ : ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ತನ್ನ ಪ್ರಾಣಬಲಿದಾನ ಎಂದು ಹೇಳಿ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ. ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ ಎಂದು ಸಾಯುವ ಮುನ್ನ ವಿಡಿಯೋ ಮಾಡಿಟ್ಟು ವಿದ್ಯಾರ್ಥಿ ನೇಣುಬಿಗಿದುಕೊಂಡಿದ್ದಾನೆ. ಹೇಮಂತ್ ಗೌಡ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಹೇಮಂತ್ ಹಾಸನ ನಗರದ ಖಾಸಗಿ ತಾಂತ್ರಿಕ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯಾಳು ನಿವಾಸಿಯಾಗಿದ್ದಾನೆ.

- Advertisement -

ಆತ್ಮಹತ್ಯೆಗೂ ಮುನ್ನ ಸುಮಾರು 13 ನಿಮಿಷ 21 ಸೆಕೆಂಡ್ ಸೆಲ್ಫಿ ವೀಡಿಯೋ ಮಾಡಿ ಅದರಲ್ಲಿ ಮುಖ್ಯಮಂತ್ರಿಗಳು,ಕುಲಪತಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಮುಂದಾಗಬೇಕು ಎಂದಿದ್ದಾನೆ.

ನನ್ನ ಅಂತ್ಯಕ್ರಿಯೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಆದಿ ಚುಂಚನಗಿರಿ ಶ್ರೀಗಳು ಭಾಗಿ ಆಗಬೇಕು. ಅಪ್ಪ ಅಮ್ಮ ಎರಡು ಮಕ್ಜಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವ ಹೇಮಂತ್, 13 ನಿಮಿಷದ ವಿಡಿಯೋ ಮಾಡಿ ನೇಣಿಗೆ ಕೊರಳೊಡ್ಡಿದ್ದಾನೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡಬಹುದು ಅಷ್ಟೇ. ಆದರೆ ನನ್ನಪ್ಪ ಶಿಕ್ಷಕರು ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧನೆ ಸಾಧ್ಯವಿಲ್ಲ. ಸಿಎಂ, ಶಿಕ್ಷಣ ಇಲಾಖೆ, ವಿಟಿಯು ವಿಸಿ ಎಲ್ಲರೂ ಚಿಂತಿಸಿ. ಎಲ್ಲಾ ರಾಜಕೀಯ ಪಕ್ಷದ ಗಣ್ಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಅಂತ ಕೋರಿದ್ದಾನೆ.

- Advertisement -

ನನ್ನ ಸಾವು ವ್ಯರ್ಥ ಅಲ್ಲ. ಯಾರಾದರು ಒಬ್ಬರ ಬಲಿದಾನ ಆಗಲೇ ಬೇಕಿತ್ತು. ಅದು ನನ್ನದೇ ಆಗಲಿ. ನಾನು ಬದಲಾವಣೆಗೆ ಬುನಾದಿ ಹಾಕುವ ಕೆಲಸ ಮಾಡಿದ್ದೇನೆ. ಅಪ್ಪ ಅಮ್ಮ ಲವ್ ಯೂ, ನಾನು ನಿಮ್ಮನ್ನ ಮಿಸ್ ಮಾಡಿಕೊಳ್ತೀನಿ. ಈ ವಿಡಿಯೋವನ್ನು ನ್ಯೂಸ್ ಚಾನಲ್ನಲ್ಲಿ ಪ್ರಸಾರ ಮಾಡಬೇಕು. ಎಲ್ಲರೂ ಈ ವಿಡಿಯೋವನ್ನು ನೋಡಬೇಕು ಎಂದು ವಿದ್ಯಾರ್ಥಿ ಹೇಮಂತ್ ಮನವಿ ಮಾಡಿದ್ದಾನೆ. ನನ್ನ ಸಾವಿನ ನಂತರ ಅಪ್ಪ ಅಮ್ಮ ಇಬ್ಬರು ಅನಾಥ ಮಕ್ಕಳನ್ನ ದತ್ತು ಪಡೆದು ಸಾಕಿ. ಆ ಇಬ್ಬರಲ್ಲಿ ನಾನು ಇರುತ್ತೇನೆ ಎಂದೂ ಹೇಳಿದ್ದಾನೆ.

ನನ್ನ ಸುಟ್ಟರೆ ಬೂದಿಯಾಗಲಿದೆ, ಮಣ್ಣು ಮಾಡಿದರೆ ಕೊಳೆಯುತ್ತದೆ. ಆದ್ದರಿಂದ, ನನ್ನ ಅಂಗಾಂಗಳನ್ನು ದಾನ ಮಾಡಬೇಕು. ಜಗದ್ಗುರು ಶ್ರೀ ನಿರ್ಮಲಾನಂಧನಾಥ ಸ್ವಾಮೀಜಿ ಆಶೀರ್ವಾದ ಪಡೆಯುವುದು ನನ್ನ ಜೀವನದ ಆಸೆಯಾಗಿತ್ತು. ಮುಖ್ಯಮಂತ್ರಿ, ಶಿಕ್ಷಣ ಸಚಿವ, ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು ಎಂದಿದ್ದಾನೆ.
ಅಪ್ಪ-ಅಮ್ಮ ನಾನು ಬೋರ್ಡಿಂಗ್ ನಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯನ್ನ ಮಿಸ್ ಮಾಡಿಕೊಂಡೆ. ಈಗಲೂ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಗೆಳತಿಗೆ ಥ್ಯಾಂಕ್ಸ್ ಹೇಳಿರುವ ಆತ, ನನ್ನ ಅಂತ್ಯಕ್ರಿಯೆಯಲ್ಲಿ ಪಾಳ್ಗೊಳ್ಳುವಂತೆ ಗೆಳತಿಗೆ ಮನವಿ ಮಾಡಿದ್ದಾನೆ. ಪ್ರಕರಣ ದಾಖಲಿಸಿರುವ ಹಾಸನ ನಗರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp