ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ್ದಕ್ಕೆ ಕಾಲೇಜಿನಿಂದ ಹೊರ ಹಾಕಿದ ಸಂಸ್ಥೆ: ವಿದ್ಯಾರ್ಥಿಯಿಂದ ಕಾಲೇಜು ಮುಂಭಾಗ ಏಕಾಂಗಿ ಪ್ರತಿಭಟನೆ

Prasthutha|

ಬೆಳ್ತಂಗಡಿ : ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ನೆಪವೊಡ್ಡಿ ಕಾಲೇಜಿನಿಂದ ವಿದ್ಯಾರ್ಥಿಯೊಬ್ಬನ್ನು ಡಿಬಾರ್ ಮಾಡಿದ ಘಟನೆಯು ಬೆಳ್ತಂಗಡಿ ವಾಣಿ ಪಿ.ಯು ಕಾಲೇಜಿನಲ್ಲಿ ನಡೆದಿದ್ದು, ಇದನ್ನು ವಿರೋಧಿಸಿ ಕಾಲೇಜು ಮುಂಭಾಗ ಸಂತ್ರಸ್ತ ವಿದ್ಯಾರ್ಥಿ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾನೆ. ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಸಅದ್ ಮುಹಮ್ಮದ್ ಸಮರ್ ಬುಧವಾರ ಕಾಲೇಜಿಗೆ ಆಗಮಿಸಿದ್ದು, ಅಲ್ಲಿ ಪ್ರಾಂಶುಪಾಲರು ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದರು. ಇದರಿಂದ ವಿದ್ಯಾರ್ಥಿ ಪ್ರತಿಭಟನೆ ಕೂತಿದ್ದಾರೆ.

- Advertisement -


ಘಟನೆ ಹಿನ್ನೆಲೆ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ದೇಶಾದ್ಯಂತ ಕಾರ್ಯಾಚರಿಸುತ್ತಿದ್ದು, ರಾಜ್ಯದ ಬಹುತೇಕ ಎಲ್ಲಾ ಕಾಲೇಜುಗಳಲ್ಲಿಯೂ ಸಂಘಟನೆಯ ಸದಸ್ಯರಿದ್ದಾರೆ. ಬೆಳ್ತಂಗಡಿಯ ವಾಣಿ ಪಿಯು ಕಾಲೇಜಿನಲ್ಲಿಯೂ ಹಲವು ವಿದ್ಯಾರ್ಥಿಗಳು ಸಿಎಫ್ ಐ ಸದಸ್ಯರಾಗಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡ ಕಾರಣಕ್ಕೆ ಸಅದ್ ಸೇರಿದಂತೆ 9 ಮಂದಿ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ಪ್ರಾಂಶುಪಾಲರು ಅಮಾನತು ಮಾಡಿದ್ದರು.


ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮವಾಗಿ 8 ವಿದ್ಯಾರ್ಥಿಗಳನ್ನು ಪುನಃ ಕಾಲೇಜಿಗೆ ತೆಗೆದುಕೊಳ್ಳಲಾಗಿತ್ತು. 8 ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಸಿ ವಿಚಾರಣೆ ನಡೆಸಿ ಶೇಕಡಾ 100ರಷ್ಟು ಶುಲ್ಕವನ್ನು ಒಮ್ಮೆಲೆ ಪಾವತಿಸಬೇಕು ಎಂಬ ಷರತ್ತಿನೊಂದಿಗೆ ಅವರನ್ನು ತರಗತಿಗೆ ಸೇರಿಸಲಾಗಿತ್ತು. ಆದರೆ ಸಅದ್ ಎಂಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಆತನ ಮನೆಗೆ ನೋಟಿಸ್ ಕಳುಹಿಸಲಾಗಿತ್ತು. ನಿನ್ನೆ ಅಂಚೆ ಮೂಲಕ ನೋಟಿಸ್ ಪಡೆದ ವಿದ್ಯಾರ್ಥಿ ಇಂದು ಕಾಲೇಜಿಗೆ ಬಂದು ಈ ಬಗ್ಗೆ ವಿಚಾರಿಸಿದ್ದಾನೆ. ಆದರೆ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ತರಗತಿಗೆ ಸೇರಿಸಲು ಒಪ್ಪಲಿಲ್ಲ, ನಿನ್ನನ್ನು ಈಗಾಗಲೇ ಡಿಬಾರ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -


ಯಾವುದೇ ಕಾರಣ ನೀಡದೆ ನನ್ನನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ, ಯಾವುದೇ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವುದು ಕಾನೂನುಬಾಹಿರವಲ್ಲ, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ವಿದ್ಯಾರ್ಥಿ ತಿಳಿಸಿದ್ದಾರೆ.
ಕಳೆದ 19 ದಿನಗಳಿಂದ ಸಂಸ್ಥೆಯೊಂದಿಗೆ ಕಾಲೇಜಿಗೆ ಸೇರಿಸುವಂತೆ ವಿನಂತಿ ಮಾಡಿದ್ದರೂ ಮಣಿಯದ ಸಂಸ್ಥೆಯು ಕಾಲೇಜಿನಿಂದ ಹೊರಹಾಕಿರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.



Join Whatsapp