ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ದಿನಾಂಕ ವಿಸ್ತರಣೆ ಮಾಡಿದ KSRTC

Prasthutha|

ಬೆಂಗಳೂರು: ಸೇವಾಸಿಂಧು ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶದ ಅವಶ್ಯಕತೆ ಇರುವುದನ್ನು ಗಮನಿಸಿದ ಕೆಎಸ್​ಆರ್​ಟಿಸಿ (KSRTC), ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಬಸ್ ಪ್ರಯಾಣದ ದಿನಾಂಕವನ್ನು ವಿಸ್ತರಣೆ ಮಾಡಿದೆ. ಅದರಂತೆ, ಜೂನ್ 15ರ ವರೆಗೆ ಇದ್ದ ಗಡುವು ಇದೀಗ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.

- Advertisement -

2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಲು ಕಾಲಾವಕಾಶ ನೀಡುವ ಸಂಬಂಧ ಜೂನ್ 15 ರ ವರೆಗೆ ಉಚಿತವಾಗಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಮತ್ತಷ್ಟು ಕಾಲಾವಕಾಶ ನೀಡಬೇಕಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಉಚಿತ ಪ್ರಯಾಣದ ಅವಕಾಶವನ್ನು ಜೂನ್ 30ರ ವರೆಗೆ ವಿಸ್ತರಿಸಿದೆ.

ಆದೇಶದ ಪ್ರಕಾರ, ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಶಾಲಾ ಅಥವಾ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡ ಸಂದರ್ಭದಲ್ಲಿ ನೀಡಲಾಗಿದ್ದ ಶುಲ್ಕ ಪಾವತಿ ರಸೀದಿ ಅಥವಾ 2022-23ನೇ ಸಾಲಿನ ವಿದ್ಯಾರ್ಥಿ ಬಸ್​ ಪಾಸ್ ತೋರಿಸಿ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರು ರಾಜ್ಯದೊಳಗೆ ಪ್ರಯಾಣಿಸುವಾಗ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

- Advertisement -

ಈಗಾಗಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಕೋರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Join Whatsapp