ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ

Prasthutha|

ಹೊಸಪೇಟೆ: ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ. ಗಣಿಗಾರಿಕೆಗೆ ಕಾನೂನುಬದ್ಧವಾಗಿ ಪರವನಾಗಿ ತೆಗೆದುಕೊಂಡಲ್ಲಿ ಮಾತ್ರ ಸಂಬಂಧಪಟ್ಟ ಇಲಾಖೆಗಳಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೊಸಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

- Advertisement -

ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ, ಎ,ಬಿ,ಸಿ  ಅಥವಾ ಯಾವುದೇ ವರ್ಗದ ಗಣಿಗಾರಿಕೆಗೆ ತೊಂದರೆ ನೀಡದಂತೆ ಸೂಕ್ತ ನಿರ್ದೇಶನ ನೀಡಲಾಗಿದೆ.  ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಪರ್ಯಾಯ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ನಾವು ಹಿಂದೆ ಅಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ನಡೆಸಿದ್ದವರು, ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಸಿಎಂ, ಹೊಸಪೇಟೆಯ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಗ್ರಂಥಾಲಯ ಕಟ್ಟಡಗಳು ಸೇರಿದಂತೆ ಒಟ್ಟು 36 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ. ಸುಸಜ್ಜಿತ ವ್ಯವಸ್ಥೆಗಳುಳ್ಳ ಈ ಕಟ್ಟಡಗಳಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಕಾಮಗಾರಿಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗಿದೆ ಎಂದರು. ವಿಜಯನಗರ ಜಿಲ್ಲೆಯಲ್ಲಿ ಮಹಿಳಾ ಪದವಿ ಕಾಲೇಜು ಹಾಗೂ ಮಹಿಳಾ ಪೊಲೀಸ್ ಠಾಣೆಯ ಅಗತ್ಯದ ಬಗ್ಗೆ ಮಾಧ್ಯಮದವರು ಕೇಳಿದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -

ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿಗಳು ಇರಲಿದ್ದಾರೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷ ಅಲ್ಲ. ಇಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು ಎಂದು ಮುಖ್ಯಮಂತ್ರಿಗಳು ಹೇಳಿದರು.

ಹಂಪಿ ಉತ್ಸವದ ಬಗ್ಗೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಕಳೆದ ಸಾಲಿನಲ್ಲಿ ಜನವರಿಯಲ್ಲಿ ಹಂಪಿ ಉತ್ಸವ ಆಚರಿಸಿದಂತೆ ಈ ಸಾಲಿನಲ್ಲಿಯೂ ಜನವರಿ ತಿಂಗಳಲ್ಲಿಯೇ ಹಂಪಿ ಉತ್ಸವ ಆಚರಿಸಲಾಗುವುದು ಎಂದರು. ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿ, ಹಂಪಿ ವಿಶ್ವವಿದ್ಯಾಲಯವು ಅನುದಾನ ಕೋರಿದ ಮೇರೆಗೆ ಅನುದಾನವನ್ನು ಕೂಡಲೇ ಒದಗಿಸಲಾಗುವುದು ಎಂದರು.

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಬಗ್ಗೆಯೂ ಉತ್ತರಿಸಿದ ಸಿಎಂ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.



Join Whatsapp