ಮಂಗಳೂರು: ತಂಬಾಕು ನಿಷೇಧ ಹೆಸರಿನಲ್ಲಿ ಸಣ್ಣ ಗೂಡಂಗಡಿಗಳ ಮೇಲೆ ದಾಳಿ ಮಾಡಿ ಅವರ ಬದುಕಿನ ಮೇಲೆ ಪ್ರಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳೂರು ಸಣ್ಣ ಗೂಡಂಗಡಿ ವ್ಯಾಪಾರಿಗಳ ಸಂಘಟನೆಯ ನೇತೃತ್ವದಲ್ಲಿ ಶನಿವಾರ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಉದ್ಯೋಗ ಸೃಷ್ಟಿ ಮಾಡದ ಸರಕಾರವು ಸ್ವಂತ ಉದ್ಯೋಗ ಮಾಡಲೂ ಬಿಡುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳು, ಗೂಡಂಗಡಿಗಳು ಸ್ವಂತ ಉದ್ಯೋಗ ಹೊರತು ಅತಿಕ್ರಮಣವಲ್ಲ. ಇಲ್ಲಿ ಕ್ಯಾನ್ಸರ್ ಬರುತ್ತಿರುವುದು ಕಾರ್ಖಾನೆಗಳ ಕಶ್ಮಲದಿಂದ ಹೊರತು ತಂಬಾಕಿನಿಂದ ಅಲ್ಲ. ಬೀದಿ ಬದಿ ವ್ಯಾಪಾರಿಗಳ ರಕ್ಷಣೆ ಕಾಯ್ದೆ ಇದೆ. ಅದರಂತೆ ಸಿಪಿಎಂ ಕಾರ್ಯ ನಿರ್ವಹಿಸುತ್ತದೆ ಎಂದು ಡಿವೈಎಫ್ ಐ ಮುಖಂಡ ಬಿ. ಕೆ. ಇಮ್ತಿಯಾಝ್ ಹೇಳಿದರು.
ಸಿಪಿಎಂ ನಾಯಕ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಇಡೀ ದೇಶದಲ್ಲಿ 20 ಕೋಟಿ ಕುಟುಂಬಗಳು ಗೂಡಂಗಡಿಗಳನ್ನು ನಂಬಿ ಬದುಕುತ್ತಿವೆ. ಒಂದು ಗೂಡಂಗಡಿ, ಬೀದಿ ಬದಿ ಅಂಗಡಿ ನಂಬಿ ಆರೇಳು ಜನ ಬದುಕುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಬೂಬಕ್ಕರ್, ಸತೀಶ್ ಮಲ್ಯ, ಮಲ್ಲಿಕಾ, ಯಶೋಧಾ ಉಪಸ್ಥಿತರಿದ್ದರು.