ಮಂಗಳೂರು | ಚಲಿಸುತ್ತಿದ್ದ ಬಸ್ ಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಕಲ್ಲು ತೂರಾಟ: ಗಾಜು ಪುಡಿಪುಡಿ

Prasthutha|

ಮಂಗಳೂರು: ಚಲಿಸುತ್ತಿದ್ದ ಬಸ್ಸಿಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಪರಾರಿಯಾಗಿರುವ ಘಟನೆ ಶನಿವಾರ ಹಾಡಹಗಲೇ ಕರಾವಳಿ ಕಾಲೇಜು ಬಳಿ ನಡೆದಿದೆ. ಕಾಟಿಪಳ್ಳದಿಂದ ಮಂಗಳಾದೇವಿಗೆ ತೆರಳುತ್ತಿದ್ದ ಎಸ್.ಎಂ.ಟ್ರಾವೆಲ್ಸ್ ಗೆ ಸೇರಿದ ಸಂಖ್ಯೆ- 15ರ ಬಸ್ಸಿಗೆ ಕಲ್ಲೆಸೆಯಲಾಗಿದ್ದು, ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆ.

- Advertisement -


ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದು, ಘಟನೆಯಿಂದ ಚಾಲಕ ಮತ್ತು ಪ್ರಯಾಣಿಕರು ಭಯಭೀತರಾಗಿದ್ದಾರೆ. ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಗೆ ತಂದು ಆರೋಪಿಗಳ ಬೆನ್ನತ್ತಿದ್ದಾರೆ. ಆದರೆ ದುಷ್ಕರ್ಮಿಗಳು ಡಿಯೋ ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ. ಡಿಯೋ ಸ್ಕೂಟರ್ ಗೆ ನೋಂದಣಿ ಸಂಖ್ಯೆ ಇರಲಿಲ್ಲ. ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಧರಿಸಿದ್ದು, ಜಾಕೆಟ್ ಹಾಕಿದ್ದರು. ಅದೇ ರೀತಿ ಮುಖಕ್ಕೆ ಮಾಸ್ಕ್ ಹಾಕಿದ್ದರು ಎಂದು ವಾಹನ ಚಾಲಕ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಲಾಯಿತು. ಘಟನೆಯ ಬಗ್ಗೆ ಪ್ರಸ್ತುತ ನ್ಯೂಸ್ ಗೆ ಪ್ರತಿಕ್ರಿಯಿಸಿದ ಬಸ್ ನ ಮಾಲೀಕ ಇಸ್ಮಾಯೀಲ್, ದುಷ್ಕರ್ಮಿಗಳು ಬಸ್ ಗೆ ಕಲ್ಲು ತೂರಾಟ ನಡೆಸಿದ್ದು, ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ಇದನ್ನು ನಾನೇ ಭರಿಸಬೇಕಾಗಿದೆ. ನೇರವಾಗಿ ಹೋರಾಟಕ್ಕೆ ಬರುವವರನ್ನು ಎದುರಿಸಬಹುದು. ಹೀಗೆ ಹಿಂಬಾಗಿಲ ಮೂಲಕ ಬರುವವರನ್ನು ಏನು ಮಾಡಲು ಸಾಧ್ಯ?. ನನಗೆ ಯಾರ ವಿರುದ್ಧವೂ ಸಂಶಯವಿಲ್ಲ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ದೂರು ನೀಡಿಲ್ಲ ಎಂದು ತಿಳಿಸಿದರು.

Join Whatsapp