ಕೋಮುಗಲಭೆಯಿಂದ ದೂರವಿರಿ; ಶಿಕ್ಷಣ, ಉದ್ಯೋಗದತ್ತ ಗಮನಹರಿಸಿ: ಬಿಲ್ಲವ ಯುವಕರಿಗೆ ಪ್ರಣವಾನಂದ ಸ್ವಾಮೀಜಿ ಕರೆ

Prasthutha|

➤ಸಂವಿಧಾನವೇ ನಮ್ಮ ದೇವರು, ಅದಕ್ಕೆ ಧಕ್ಕೆಯಾಗಬಾರದು

- Advertisement -

ಉಡುಪಿ: ರಾಜ್ಯದಲ್ಲಿ ಅಹಿತಕರ ಬೆಳವಣಿಗೆ ಬೆನ್ನಲ್ಲೇ ಹಿಂದೂ ಸಂಘಟನೆಗಳ ಜೊತೆ ಗುರುತಿಸಿಕೊಳ್ಳುತ್ತಿದ್ದ ಶ್ರೀಪ್ರಣವಾನಂದ ಸ್ವಾಮೀಜಿ ತಮ್ಮ ಸಮುದಾಯದ ಯುವಕರಿಗೆ ಕೋಮು ಗಲಭೆಯಿಂದ ದೂರ ನಿಲ್ಲುವಂತೆ ಕರೆಯಿತ್ತಿದ್ದಾರೆ. ಸರ್ವಜನಾಂಗದ ಶಾಂತಿಯತೋಟವಾಗಿರುವ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಧರ್ಮ ಧರ್ಮದ ನಡುವೆ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಶರಣಬಸವೇಶ್ವರ ಮಠಾಧಿಪತಿಯೂ ಆಗಿರುವ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನವೇ ನಮ್ಮ ದೇವರು. ನಮ್ಮ ಆಚಾರ ವಿಚಾರ ಅದಕ್ಕೆ ಧಕ್ಕೆಯಾಗಬಾರದು. ಅವರವರ ಧರ್ಮದ ಆಚಾರ ವಿಚಾರಗಳನ್ನು‌ ಅವರು ಆಚರಣೆ ಮಾಡಿಕೊಂಡು ಹೋಗಲಿ.‌ ಅದು ಬಿಟ್ಟು ಒಂದು ಧರ್ಮದ ಸಂಪ್ರದಾಯ, ಆಚಾರ-ವಿಚಾರಗಳನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಸರಿಯಲ್ಲ ಎಂದರು.

- Advertisement -

ನಾವೆಲ್ಲರೂ ಸಂವಿಧಾನಾತ್ಮಕ ದೇಶದಲ್ಲಿ ಬದುಕುತ್ತಿರುವವರು. ಹಾಗಾಗಿ ಯಾವುದೇ ಘರ್ಷಣೆ, ಸಂಘರ್ಷಕ್ಕೆ ಯಾರು ಅವಕಾಶ ಮಾಡಿಕೊಡಬಾರದು. ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡು ಮುನ್ನಡೆಯುವ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.

ಭಾರತ ಸಾವಿರಾರು  ವರ್ಷಗಳ ಇತಿಹಾಸ ಹೊಂದಿರುವ‌ ದೇಶ. ಹೊರಗಿನಿಂದ ಬಂದವರನ್ನು ಎರಡು ಕೈಗಳಿಂದ ತಬ್ಬಿಕೊಂಡು ಬರಮಾಡಿಕೊಂಡಿದೆ. ಹೀಗಾಗಿ ಧರ್ಮ ಧರ್ಮದ ನಡುವೆ ಯಾವುದೇ ಘರ್ಷಣೆ ಇಲ್ಲದೆ, ಎಲ್ಲರೂ ಹೊಂದಾಣಿಕೆಯಿಂದ ಮುನ್ನಡೆಯಬೇಕು. ಸಂವಿಧಾನದಲ್ಲಿ ಹೇಳಿರುವ ಆಶಯಗಳನ್ನು ಎಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದರು

ಬಿಲ್ಲವ ಯುವಕರು ಕೋಮು ಸಂಘರ್ಷದ ಕಡೆ ಗಮನಹರಿಸದೆ, ಉದ್ಯೋಗ, ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಬಾರದು. ಈ ಭೂಮಿಯಲ್ಲಿ ನಮ್ಮ ಜೀವನ ಇರುವುದು ಸ್ವಲ್ಪ ದಿನ.‌ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು.‌ಯಾವುದೇ ಪಕ್ಷದಲ್ಲಿ ಇದ್ದರು ಅದರ ಸಿದ್ದಾಂತಕ್ಕೆ ಬದ್ಧರಾಗಿರಬೇಕೇ ಹೊರತು, ಇನ್ನೊಂದು ಜನಾಂಗಕ್ಕೆ ನೋವುಂಟು ಮಾಡುವ ಕೆಲಸ ಮಾಡಬಾರದು.

ಪ್ರತಿಯೊಬ್ಬ ಬಿಲ್ಲವ, ಪೂಜಾರಿ ಈಡಿಗರ ಮನೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದ ಪೂಜಾ ವಿಧಿವಿಧಾನಗಳು ನಡೆಯಬೇಕೆ ಹೊರತು ಬೇರೆಯವರು ಹೇಳಿದ ವಿಧಾನಗಳಲ್ಲ. ಅದ್ವೈತವನ್ನು ನಾರಾಯಣಗುರುಗಳು ಜೀವನದಲ್ಲಿ ಅಳವಡಿಸಿ ತೋರಿಸಿಕೊಟ್ಟಿದ್ದಾರೆ. ಕೆಲವರು ಅದ್ವೈತ ಹೇಳಿದರೂ ಅವರಲ್ಲಿ ಯಾವುದೇ ಅದ್ವೈತ ಕಂಡುಬಂದಿಲ್ಲ ಎಂದು  ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಮ್ಮ ಸಮುದಾಯವನ್ನು ಮುಗಿಸುವ ಹುನ್ನಾರ ಮಾಡಲಾಗುತ್ತಿದೆ. ಈ ಸಮುದಾಯ ಈಗ ಕಡು ಬಡತನದಲ್ಲಿದೆ. ಎಸ್.ಬಂಗಾರಪ್ಪ ಹೋದ ಬಳಿಕ ನಮ್ಮ  ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಸರಕಾರ ನಮ್ಮ ಸಮುದಾಯವನ್ನು ಶೋಷಣೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.



Join Whatsapp