ಬೆಳ್ತಂಗಡಿ: ಈ ವರ್ಷದ ಜುಲೈನಲ್ಲಿ ಮೃತಪಟ್ಟ ಹಿರಿಯ ದಲಿತ ನಾಯಕ ಮತ್ತು ಬಹುಜನ ಚಳವಳಿಯ ನೇತಾರ ಪಿ.ಡೀಕಯ್ಯ ಅವರ ಸಾವಿನ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ.
ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿಯಾಗಿದ್ದ ಪಿ.ಡೀಕಯ್ಯ , ಜುಲೈ 6ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಕುಸಿದು ಬಿದ್ದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜುಲೈ 8 ರಂದು ನಿಧನರಾಗಿದ್ದರು.
ಪಿ ಡೀಕಯ್ಯ ಸಾವಿನ ಬಗ್ಗೆ ಹಲವಾರು ಶಂಕೆಗಳು ವ್ಯಕ್ತವಾಗಿದ್ದು ಜುಲೈ 15ರಂದು ಡೀಕಯ್ಯ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ ಪೊಲೀಸರು ಬೆಳ್ತಂಗಡಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಜುಲೈ 18ರಂದು ಮೃತದೇಹವನ್ನು ಹೊರತೆಗೆದು ಜಿಲ್ಲೆಯ ವೈದ್ಯಾಧಿಕಾರಿಗಳ ತಂಡದ ಸಮ್ಮುಖದಲ್ಲಿ ಶವ ಪರೀಕ್ಷೆ ಮಾಡಲಾಗಿತ್ತು.
ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಮನೆಯವರ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹಲವರನ್ನು ವಿಚಾರಣೆ ಮಾಡಿದ್ದರು. ಈ ಮಧ್ಯೆ ಡೀಕಯ್ಯ ಅವರ ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಐಡಿ ತನಿಖೆಗೆ ಒತ್ತಾಯಿಸಿದ್ದು, ನ. 4 ರಂದು ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ಇಲಾಖೆಗೆ ಒಪ್ಪಿಸಿದೆ.