ಶಾಂತಿ ಕದಡುವವರಿಗೆ ರಾಜ್ಯ ಬಿಜೆಪಿ ಸರ್ಕಾರ ಪರೋಕ್ಷ ಬೆಂಬಲ: ವೆಲ್ಫೇರ್ ಪಾರ್ಟಿ ಆಕ್ರೋಶ

Prasthutha|

ಬೆಂಗಳೂರು: ರಾಜ್ಯದ ಅಭಿವೃದ್ಧಿಯನ್ನು ಕಾಲ ಕಸ ಮಾಡಿಕೊಂಡಿರುವ ರಾಜ್ಯ ಸರ್ಕಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ, ದಿ ಕಾಶ್ಮೀರ್ ಫೈಲ್ ಹೀಗೆ ಶಾಂತಿ ಕದಡುವವರ ವಿರುದ್ಧ ಕ್ರಮಕೈಗೊಳ್ಳುವ ಬದಲು  ಮೌನವಹಿಸಿ ಅವರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಧರ್ಮಗ್ರಂಥಗಳ ತತ್ವಕ್ಕೆ ವಿರುದ್ಧವಾಗಿ ಮನುಷ್ಯ ದ್ವೇಷ ಪಸರಿಸುತ್ತಿರುವವರು ನಿಜವಾದ ಧರ್ಮದ್ರೋಹಿಗಳು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ಸಾಧನೆಯ ಆಧಾರದಲ್ಲಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಮುಖವಿಲ್ಲ. ಹಾಗಾಗಿ ಮುಗ್ಧ ಜನರಿಗೆ ಧರ್ಮದ ಕಣ್ಕಾಪು ಕಟ್ಟಿ ಮೂರ್ಖರನ್ನಾಗಿಸುತ್ತಿದೆ. ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಈ ಸರ್ಕಾರದಲ್ಲಿ 40% ಕಮೀಷನ್ ದಂಧೆ ನಿರಂತರವಾಗಿ ನಡೆಯುತ್ತಿದೆ. ಸಚಿವ ಈಶ್ವರಪ್ಪ ಕಮಿಷನ್ ಕೇಳಿದ ಬಗ್ಗೆ ಗುತ್ತಿಗೆದಾರರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮವಿಲ್ಲ. ಸಂಪುಟದಲ್ಲಿ ಲಂಚಕೋರರ ಗುಂಪೇ ಇದೆ. ಕಮಿಷನ್ ದಂಧೆಯ ವಿಚಾರ ಮರೆಮಾಚಲು ಈ ಸರ್ಕಾರ ಧರ್ಮದ ಅಸ್ತ್ರ ಬಳಸಿ ನಾಟಕವಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಜಿಎಸ್ಟಿ  ಪಾಲು ಸಮರ್ಪಕವಾಗಿ ಸಿಕ್ಕಿಲ್ಲ. ಇತ್ತ ರಾಜ್ಯ 15 ಸಾವಿರ ಕೋಟಿ ರಾಜಸ್ವ ಕೊರತೆಯಲ್ಲಿದೆ. ಈ ಸರ್ಕಾರಕ್ಕೆ ಈ ವಿಚಾರಗಳು ಅಪ್ರಸ್ತುತವಾಗಿರುವುದು ದುರಂತ. ಕೇಂದ್ರದಿಂದ ಜಿಎಸ್ ಟಿ ಪಾಲು ಕೇಳಲು ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಆದರೆ ಸದಾಕಾಲ ಧರ್ಮ ದೇವರು ಎಂದು ಹೇಳಿಕೊಂಡು ಕಲಹ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆ. ಭಗವದ್ಗೀತೆ, ಬೈಬಲ್, ಕುರ್ ಆನ್ ಸೇರಿದಂತೆ ಎಲ್ಲಾ ಗ್ರಂಥಗಳ ಸಾರವೇ ಶಾಂತಿ ಮತ್ತು ಪ್ರೀತಿ. ಯಾವ ಧರ್ಮವೂ ಮನುಷ್ಯ ದ್ವೇಷದ ಬೋಧನೆ ಮಾಡಿಲ್ಲ. ಗ್ರಂಥಗಳ ಸಾರ ಗೊತ್ತಿಲ್ಲದ ಬಿಜೆಪಿಯವರು ಜನರ ಮನಸ್ಸಿನಲ್ಲಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ ಎಂದು ತಾಹಿರ್ ಹುಸೇನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp