ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ | ಶೋಮಾ ಸೇನ್ ಗೆ ತಲಾ 5 ಲಕ್ಷ ಪಾವತಿಸಲು ಸರಕಾರ, ವಿವಿಗೆ ಬಾಂಬೆ ಹೈಕೋರ್ಟ್ ಆದೇಶ

Prasthutha|

ಮುಂಬೈ : 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ನಾಗ್ಪುರ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಶೋಮಾ ಸೇನ್ ಅವರಿಗೆ ತಲಾ 5 ಲಕ್ಷ ರೂ. ಪಾವತಿಸುವಂತೆ ಬಾಂಬೆ ಹೈಕೋರ್ಟ್ ನಾಗ್ಪುರ ವಿಶ್ವವಿದ್ಯಾಲಯ ಮತ್ತು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಇಂಗ್ಲಿಷ್ ವಿಭಾಗದ ಮಾಜಿ ಮುಖ್ಯಸ್ಥರಾದ ಶೋಮಾ ಸೇನ್ ಅವರನ್ನು ಪ್ರಕರಣದಲ್ಲಿ ಬಂಧಿಸಿದ ಕಾರಣ, ಅವರ ಗ್ರಾಚ್ಯುಟಿ ಹಣವನ್ನು ತಡೆಹಿಡಿಯಲಾಗಿತ್ತು.

- Advertisement -

ಶೋಮಾ ಸೇನ್ ಗೆ 5 ಲಕ್ಷ ರೂ. ಪಾವತಿಸುವಂತೆ ವಿವಿಗೆ ಕೊರ್ಟ್ ಕಳೆದ ತಿಂಗಳೇ ಆದೇಶಿಸಿತ್ತು. ಆದರೆ, ವಿವಿ ಸೇನ್ ಗೆ ಮೊತ್ತ ಪಾವತಿಸುವುದರ ಬದಲು, ಕೋರ್ಟ್ ರಿಜಿಸ್ಟ್ರಿಗೆ ಪಾವತಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ, ಇದಕ್ಕೆ ಒಪ್ಪದ ಕೋರ್ಟ್, ಒಂದು ವಾರದೊಳಗೆ ಸೇನ್ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಆದೇಶಿಸಿದೆ. ಸೇನ್ ಅವರು ಬಂಧನದಲ್ಲಿರುವುದರಿಂದ ಮೊತ್ತವನ್ನು ಅವರ ಖಾತೆಗೆ ನೆಫ್ಟ್ ಮಾಡುವಂತೆ ಕೋರ್ಟ್ ನಿರ್ದೇಶಿಸಿದೆ.
ಸೇನ್ ಅವರು ತಮ್ಮ 60ನೇ ವಯಸ್ಸಿನಲ್ಲಿ 2018ರ ಜುಲೈ 31ಕ್ಕೆ ನಿವೃತ್ತರಾಗಿದ್ದಾರೆ. 2018ರ ಜೂನ್ 6ಕ್ಕೆ ಅವರನ್ನು ಬಂಧಿಸಲಾಗಿತ್ತು. 48 ಗಂಟೆಗಳ ಕಾಲ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು ಮತ್ತು ಎಫ್ ಐಆರ್ ದಾಖಲಿಸಲಾಗಿತ್ತು. ಐಪಿಸಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ವಯಡಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬಂಧನ ಮತ್ತು ಪ್ರಕರಣ ದಾಖಲೆಯ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯ 2018, ಜೂ.15ರಿಂದ ಅಮಾನತು ಆದೇಶ ಹೊರಡಿಸಿತ್ತು. ನಿವೃತ್ತರಾಗಿ ಎರಡು ವರ್ಷಗಳಾದರೂ, ನಿವೃತ್ತಿ ಸೌಲಭ್ಯಗಳು ಅವರಿಗೆ ಇನ್ನೂ ಸಿಕ್ಕಿಲ್ಲ.

Join Whatsapp