ರಾಮನಗರದಲ್ಲಿ ಅಶ್ವಥ್ ನಾರಾಯಣರಿಂದ ವಿವಾದಾತ್ಮಕ ಭಾಷಣ: ಮುಖ್ಯಮಂತ್ರಿ ಎದುರಲ್ಲೇ ಡಿ.ಕೆ ಸುರೇಶ್ ಜೊತೆ ಮಾತಿನ ಚಕಮಕಿ

Prasthutha|

ರಾಮನಗರ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮುಂದೆಯೇ  ಸಚಿವ ಅಶ್ವಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ವೇದಿಕೆಯಲ್ಲಿ   ಮಾತಿನ ಚಕಮಕಿ ನಡೆದಿರುವ ಘಟನೆ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

- Advertisement -

ಅಶ್ವಥ್ ನಾರಾಯಣ್ ಅವರ ಭಾಷಣದ ವೇಳೆ ಬಿಜೆಪಿಗೆ ಧಿಕ್ಕಾರ ಎಂದು ಸಭೆಯಿಂದ ಕೂಗಿದ್ದು, ಈ ವೇಳೆ ಆಕ್ರೋಶಿತರಾದ ಅಶ್ವಥ್ ನಾರಾಯಣ, ಯಾವನೋ ಅವನು ಗಂಡ್ಸು… ಎದ್ದು ನಿಂತು ಕೂಗು ಎಂದು ಅವಾಜ್ ಹಾಕಿದ್ದಾರೆ. ಆ ಬಳಿಕ ಅಶ್ವಥ್ ನಾರಾಯಣ ಸುರೇಶ್ ರಾಜಕೀಯ ವಿಚಾರವನ್ನು ಕೆದಕಿ ಭಾಷಣ ಮಾಡಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಆಕ್ರೋಶಗೊಂಡಿದ್ದಾರೆ.

ಅಶ್ವಥ್ ನಾರಾಯಣ ಭಾಷಣದಿಂದ ಆಕ್ರೋಶಗೊಂಡ ಡಿ.ಕೆ.ಸುರೇಶ್  ಅಶ್ವಥ್ ನಾರಾಯಣ್ ಭಾಷಣದ ನಡುವೆಯೇ ಅಶ್ವಥ್ ನಾರಾಯಣ್ ಬಳಿಗೆ ಹೋಗಿ ಏನು ಮಾತನಾಡುತ್ತಿದ್ದೀರಿ ನೀವು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ನಡುವೆ MLC ರವಿ ಅಶ್ವಥ್ ನಾರಾಯಣ್ ಬಳಿ ಇದ್ದ ಮೈಕ್ ಎಳೆದು ಘೋಷಣೆ ಕೂಗಲು ಯತ್ನಿಸಿದ್ದು, ಆದರೆ, ಅಶ್ವಥ್ ನಾರಾಯಣ್ ಮೈಕ್ ನ್ನು ಎಳೆದುಕೊಂಡರು. ಇದರಿಂದಾಗಿ ಕೆಲ ಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆ ಬಳಿಕ ಡಿ.ಕೆ. ಸುರೇಶ್ ವೇದಿಕೆಯಲ್ಲಿಯೇ ಧರಣಿ ನಡೆಸಿದರು.

- Advertisement -

ತೀವ್ರ ಆಕ್ರೋಶಗೊಂಡ ಇಬ್ಬರು ಮುಖಂಡರು ಪರಸ್ಪರ ಬೈದಾಡಿಕೊಂಡು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಈ ಬೆಳವಣಿಗೆ ಕಾಂಗ್ರೆಸ್ – ಬಿಜೆಪಿ ನಡುವೆ ವ್ಯಾಪಕ ವಾಕ್ಸಮರಕ್ಕೆ ಕಾರಣವಾಗಿದೆ.  ಜತೆಗೆ ಡಿ.ಕೆ. ಸುರೇಶ್ ಬೆಂಬಲಿಗರು ನಗರದ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್ ಬಂಟಿಂಗ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ನಾಡಪ್ರಭು ಕೆಂಪೇಗೌಡ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿತವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ನೀರಾವರಿ ಯೋಜನೆಗಳ ಅನುಷ್ಠಾನ ಬಿಜೆಪಿ ಸರ್ಕಾರದಿಂದಲೇ ಸಾಧ್ಯ. ತಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ನೆರವೇರಿಸಿದೆ. ಇಲ್ಲಿ ಬಿಜೆಪಿ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ತಮ್ಮ ಸರ್ಕಾರದಲ್ಲೇ ಯೋಜನೆಗಳನ್ನು ರೂಪಿಸಿ ತಮ್ಮ ಅವಧಿಯಲ್ಲಿಯೇ ಸಂಪೂರ್ಣಗೊಳಿಸುತ್ತೇವೆ ಎಂದರು.

ಈ ಹಂತದಲ್ಲಿ ಸಿಟ್ಟಾದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ ನಾರಾಯಣ ನಾರಾಯಣ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವೇದಿಕೆ ಕಾರ್ಯಕ್ರಮದಲ್ಲಿ ತಮಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂದು ಆಪಾದಿಸಿ ವೇದಿಕೆಯಲ್ಲಿಯೇ ಧರಣಿ ಕುಳಿತರು.

ಇದರಿಂದ ಆಕ್ರೋಶಗೊಂಡ ಅಶ್ವತ್ಥ ನಾರಾಯಣ ಮುಖ್ಯಮಂತ್ರಿ ಭಾಗವಹಿಸಿರುವ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದರಿಂದ ಮಾತಿಗೆ ಮಾತು ಬೆಳೆದಿದ್ದು, ವಿಧಾನಪರಿಷತ್ ಸದಸ್ಯ ಸಿ. ರವಿ, ಅಶ್ವತ್ಥ ನಾರಾಯಣ ಅವರು ಮಾತನಾಡುತ್ತಿದ್ದ ಮೈಕ್ ಕಿತ್ತುಕೊಂಡ ಘಟನೆಯೂ ನಡೆದಿದೆ. ಸಂಸದ ಹಾಗೂ ಸಚಿವರ ವಾಗ್ವಾದದಿಂದಾಗಿ ವೇದಿಕೆ ಗೊಂದಲ ಮತ್ತು ಗೋಜಲುಗಳಿಂದ ಕೂಡಿತು.

ಕೊನೆಗೆ ಜಟಾಪಟಿ ಜೋರಾಯಿತು. ವೇದಿಕೆಯಲ್ಲಿದ್ದ ಸಚಿವರಾದ ಬೈರತಿ ಬಸವರಾಜು, ಸುಧಾಕರ್ ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಪರಿಸ್ಥಿತಿ ಸರಿಯಾಗಲಿಲ್ಲ. ಕೂಗಾಟ, ಬೈಯ್ದಾಟ ನಡೆದೇ ಇತ್ತು. ನಂತರ ಮುಖ್ಯಮಂತ್ರಿಗಳು ಎಲ್ಲರನ್ನು ಸಮಾಧಾನಪಡಿಸಿ, ಗಲಾಟೆಯನ್ನು ಶಮನಗೊಳಿಸಿದರು.
ಈ ವಾದ, ವಾಗ್ವಾದ, ಗಲಾಟೆ ಎಲ್ಲವೂ ಮುಖ್ಯಮಂತ್ರಿಗಳು ಹಾಗೂ ನೂರಾರು ಜನರ ಸಮ್ಮುಖದಲ್ಲೇ ನಡೆಯಿತು



Join Whatsapp