ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯ ಅಚಾತುರ್ಯ: ತಪ್ಪಿದ ಭಾರೀ ಅನಾಹುತ !

Prasthutha|

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಎರಡು ಇಂಡಿಗೋ ವಿಮಾನಗಳಿಗೆ ಏಕಕಾಲಕ್ಕೆ ಹೊರಡಲು ಅನುಮತಿ ನೀಡಿದ್ದರಿಂದ ಪರಸ್ಪರ ಎರಡೂ ವಿಮಾನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಸಂಭವನೀಯತೆ ಸೃಷ್ಟಿಯಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

 ಜನವರಿ 7 ರಂದು ಈ ಘಟನೆ ಸಂಭವಿಸಿದೆ. ಕೋಲ್ಕತ್ತಾಗೆ 6ಇ 455 ಸಂಖ್ಯೆಯ ಇಂಡಿಗೊ ವಿಮಾನ  ಹಾಗೂ ಭುವನೇಶ್ವರಕ್ಕೆ 6ಇ 246 ವಿಮಾನ ಟೇಕ್ ಆಫ್ ಆಗಲು ಏರ್ ಟ್ರಾಫಿಕ್ ನಿಂದ ಅನುಮತಿ ನೀಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎರಡು ರನ್ ವೇಗಳಿವೆ. ಒಂದು ಉತ್ತರ ರನ್ ವೇ ಮತ್ತೊಂದು ದಕ್ಷಿಣ ರನ್ ವೇ. ಎರಡೂ ರನ್ ವೇ ಇದ್ದರೂ ಎರಡೂ ವಿಮಾನಗಳಿಗೆ ಏಕ ಕಾಲಕ್ಕೆ ಹೊರಡಲು ಅವಕಾಶ ನೀಡುವುದಿಲ್ಲ. ಏಕೆಂದರೆ ಟೇಕ್ ಆಫ್ ಆದ ಬಳಿಕ ಆಕಾಶದಲ್ಲಿ ಅವು ಪರಸ್ಪರ ಡಿಕ್ಕಿಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಮಾನಾಂತರ ರನ್ ವೇ ಕಾರ್ಯಾಚರಣೆಗಳು ಕಾರ್ಯಸಾಧ್ಯವಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ.

- Advertisement -

ಜನವರಿ 7ರಂದು ಬೆಳಿಗ್ಗೆ, ಉತ್ತರ ರನ್ ವೇಯನ್ನು ನಿರ್ಗಮನಕ್ಕಾಗಿ ಮತ್ತು ದಕ್ಷಿಣ ರನ್ ವೇಯನ್ನು ಆಗಮನಕ್ಕಾಗಿ ಬಳಸಲಾಗುತ್ತಿತ್ತು. ನಂತರ, ಶಿಫ್ಟ್ ಇನ್-ಚಾರ್ಜ್ ದಕ್ಷಿಣ ರನ್ ವೇಯನ್ನು ಮುಚ್ಚಲು ನಿರ್ಧರಿಸಿದರು. ಆದರೆ ದಕ್ಷಿಣ ಗೋಪುರದ ವಾಯು ಸಂಚಾರ ನಿಯಂತ್ರಕರಿಗೆ ಈ ವಿಷಯವನ್ನು ತಿಳಿಸಲು ಅವರು ಮರೆತುಹೋಗಿದ್ದೇ ಈ ಘಟನೆಗೆ ಕಾರಣ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು “ದಿ ಹಿಂದೂ” ವರದಿ ಮಾಡಿದೆ.

ಇದರ ಪರಿಣಾಮವಾಗಿ, ಎರಡು ವಿಮಾನಗಳಿಗೆ ಒಂದೇ ಸಮಯದಲ್ಲಿ  ರನ್ ವೇಗಳಿಂದ ಟೇಕ್-ಆಫ್ ಗೆ ಅನುಮತಿ ನೀಡಲಾಯಿತು. ಇದರಿಂದಾಗಿ ಒಂದೇ ದಿಕ್ಕಿನಲ್ಲಿ ಚಲಿಸುವ ವಿಮಾನ ಪರಸ್ಪರ ಡಿಕ್ಕಿ ಹೊಡೆಯುವ ಪರಿಸ್ಥಿತಿ ಉಂಟಾಯಿತು. ರಾಡಾರ್ ನಿಯಂತ್ರಕ ತಕ್ಷಣ ಇದನ್ನು ಗಮನಿಸಿ ಪೈಲಟ್ ಗೆ ಎಚ್ಚರಿಕೆ ರವಾನಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಈ ಘಟನೆಗೆ ಕಾರಣವಾದ ವಾಯು ಸಂಚಾರ ನಿಯಂತ್ರಕರ ಲೋಪಗಳ ಬಗ್ಗೆ ಗಂಭೀರ ಉದ್ಭವವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನಯಾನ ಸಂಸ್ಥೆ ಈ ಬಗ್ಗೆ ಡಿಜಿಸಿಎಗೆ ವರದಿ ಮಾಡುವಲ್ಲಿಯೂ ವಿಫಲವಾಗಿವೆ. “ಇದರಲ್ಲಿ ಭಾಗಿಯಾಗಿರುವ ಯಾರು ಕೂಡ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಾವು ಸ್ವತಃ ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

ಡಿಜಿಸಿಎ ಈ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಇಂಡಿಗೊ ನಿರಾಕರಿಸಿದೆ.

ತಿಂಗಳ ಹಿಂದೆಯೂ ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡೂ ವಿಮಾನಗಳು ಏಕಕಾಲದಲ್ಲಿ ಒಂದೇ ರನ್ ವೇಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Join Whatsapp