ಮಂಗಳೂರು: ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಭೀತಿ ಎದುರಾಗಿದೆ.
ಜನತಾ ಬಜಾರ್ ಬಳಿಯ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಎಂಬ ಕಟ್ಟಡದಲ್ಲಿ ಇಂದು ಮಧ್ಯಾಹ್ನದ ಬಳಿಕ ಬಿರುಕು ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಕಟ್ಟಡದ ಬೀಮ್ ನ ಕಾಂಕ್ರೀಟ್ ತುಂಡುಗಳು ಒಂದೊಂದಾಗಿ ಕೆಳಗೆ ಬೀಳಲು ಪ್ರಾರಂಭಿಸಿದವು.
ಕೂಡಲೇ ಕಟ್ಟಡದ ಒಳಗಿದ್ದವರನ್ನು ತೆರವುಗೊಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಸುತ್ತಮುತ್ತಲ ಕಟ್ಟಡಗಳಲ್ಲಿದ್ದವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಕಟ್ಟಡದ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಈ ಕಟ್ಟಡದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ಇತರ ವಾಣಿಜ್ಯ ಕಚೇರಿಗಳಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಹೆಚ್ಚಿನವರು ಇರಲಿಲ್ಲ ಎಂದು ತಿಳಿದುಬಂದಿದೆ.