ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದ ಶ್ರೀಲಂಕಾ

Prasthutha|

ಲಖನೌ : ಏಕದಿನ ವಿಶ್ವಕಪ್ 2023ರ 19ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ತಂಡವು 5 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಲಖನೌನ ಏಕಾನಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಪಂದ್ಯ ನಡೆದಿದ್ದು, ಲಂಕಾ ಸತತ ಸೋಲಿನ ಸರಪಳಿ ಕಳಚಿದೆ.ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ.

- Advertisement -

ಮೊದಲು ಬ್ಯಾಟಿಂಗ್‌ ನಡೆಸಿದ ನೆದರ್ಲೆಂಡ್ಸ್, ಎನ್‌ಗೆಲ್‌ಬ್ರೆಕ್ಟ್ ಮತ್ತು ವ್ಯಾನ್ ಬೀಕ್ ಶತಕದ ಜೊತೆಯಾಟ ನೆರವಿನಿಂದ 262 ರನ್‌ ಗಳಿಸಿ ಆಲೌಟ್‌ ಆಯ್ತು. 263 ರನ್‌ಗಳ ಗುರಿ ಪಡೆದ ಶ್ರೀಲಂಕಾ, 48.2 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಡಚ್ಚರು ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಲು ಮೈದಾನಕ್ಕಿಳಿದ ಲಂಕಾ ಆರಂಭದಲ್ಲೇ ಬ್ಯಾಟಿಂಗ್‌ ಕುಸಿತ ಕಂಡಿತು. ಕೇವಲ 5 ರನ್‌ ಗಳಿಸಿ ಕುಸಲ್‌ ಪರೇರಾ ನಿರ್ಗಮಿಸಿದರೆ, ಅವರ ಬೆನ್ನಲ್ಲೇ ಲಂಕಾ ತಂಡದ ನಾಯಕ ಕುಸಲ್‌ ಮೆಂಡಿಸ್‌ ಕೂಡಾ ಅಗ್ಗಕ್ಕೆ ವಿಕೆಟ್‌ ಕಳೆದುಕೊಂಡರು. ಆರ್ಯನ್‌ ದತ್ತ್‌ ನೆದರ್ಲೆಂಡ್ಸ್‌ ತಂಡಕ್ಕೆ ಎರಡನೇ ಮುನ್ನಡೆ ತಂದುಕೊಟ್ಟರು. ಈ ವೇಳೆ ಸಮರವಿಕ್ರಮ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ ಪಾತುಮ್‌ ನಿಸ್ಸಂಕಾ, ಅರ್ಧಶತಕ ಸಿಡಿಸಿ ಸಮರವಿಕ್ರಮ ಜೊತೆಗಿನ 52 ರನ್‌ಗಳ ಜೊತೆಯಾಟಕ್ಕೆ ಮೀಕರನ್ ಮಂಗಳ ಹಾಡಿದರು. ಅವರು 54 ರನ್ ಮಾಡಿದರು.ಈ ವೇಳೆ ಒಂದಾದ ಅಸಲಂಕಾ ಮತ್ತು ಸಮರವಿಕ್ರಮ ರಕ್ಷಣಾತ್ಮಕ ಆಟವಾಡಿದರು. 44 ರನ್‌ ಗಳಿಸಿ ಅಸಲಂಕಾ ಆರ್ಯನ್‌ ದತ್‌ಗೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಡಿಸಿಲ್ವಾ ಮತ್ತು ಸಮರವಿಕ್ರಮ ಜೊತೆಯಾಟ ಮುಂದುವರೆಸಿದರು. ಗೆಲುವಿನ ಸನಿಹದಲ್ಲಿ ಡಿಸಿಲ್ವಾ 30 ರನ್‌ ಗಳಿಸಿ ಔಟಾದರೆ ಅಬ್ಬರ ಮುಂದುವರೆಸಿದ ಸಮರವಿಕ್ರಮ 107 ಎಸೆತಗಳನ್ನು ಎದುರಿಸಿ ಜವಾಬ್ದಾರಿಯುತ 91 ರನ್‌ ಸಿಡಿಸಿದರು.ನೆದರ್ಲೆಂಡ್ಸ್‌ ಪರ ಆರ್ಯನ್‌ ದತ್‌ ಪ್ರಮುಖ ಮೂರು ವಿಕೆಟ್‌ ಕಬಳಿಸಿದರು.