ಪುನೀತ್ ಕೆರೆಹಳ್ಳಿ ಬಂಧನ: ಡೋಂಗಿ ಹಿಂದುತ್ವದ ಬಿಜೆಪಿ ನಾಯಕರೇ ಈ ಬಗ್ಗೆ ಧ್ವನಿ ಎತ್ತಿ ಎಂದ ಶ್ರೀರಾಮ ಸೇನೆ

Prasthutha|

ಬೆಂಗಳೂರು: ಗೂಂಡಾ ಕಾಯ್ದೆ ಅಡಿಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ರಾಜ್ಯ ಸರ್ಕಾರದ ಮತ್ತು ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದಿವೆ.

- Advertisement -

ಪುನೀತ್ ಕೆರೆಹಳ್ಳಿ ಬೆಂಬಲವಾಗಿ ನಿಲ್ಲದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ನಾಯಕರಿಗೆ ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ. ಶೀಘ್ರವೇ ಪುನೀತ್ ಕೆರೆಹಳ್ಳಿಯನ್ನ ಬಿಡುಗಡೆ ಮಾಡದಿದ್ದರೆ ರಾಜ್ಯ ಸರ್ಕಾರ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಡೋಂಗಿ ಹಿಂದುತ್ವದ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿ ಪುನೀತ್ ಕೆರೆ ಹಳ್ಳಿಯ ಬೆಂಬಲಕ್ಕೆ ನಿಲ್ಲಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ ಎಂದಿದೆ.

ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಸಂಘಟನೆಗಳನ್ನು ತಮ್ಮ ದ್ವೇಷದ ರಾಜಕಾರಣಕ್ಕೆ ಬಲಿಪಶು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಪುನೀತ್ ಕೆರೆಹಳ್ಳಿ ಮೇಲೆ ಗೂoಡ ಕಾಯ್ದೆ ಹಾಕಿ ಬಂದಿಸಿರುವುದು. ಮುಸ್ಲಿಮರ ಮತ ಬ್ಯಾಂಕಿನಿಂದ ಗೆದ್ದಿರುವ ಕಾಂಗ್ರೆಸ್ ದೇಶದ್ರೋಹಿ ಜಿಹಾದಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಿದ್ದು ಇದು ದೇಶಕ್ಕೆ ಮಾರಕ ಎಂದು ಹೇಳಿದೆ.

- Advertisement -

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕಣದ ಅಪರಾಧಿಗಳು, ಪಾದರಾಯನಪುರ ಗಲಭೆಕೋರರು, ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪ್ ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಸುಮಾರು ಕಡೆ ಗಲಭೆ ಸೃಷ್ಟಿದ ಮುಸ್ಲಿಮರ ವಿರುದ್ಧ ಯಾವುದೇ ಕಠಿಣ ಕ್ರಮ ಇಲ್ಲ. ಗೋ ರಕ್ಷಣೆ, ಹಿಂದೂ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತಿರುವ ಹಿಂದೂ ಮುಖಂಡರುಗಳಿಗೆ ಕಡಿವಾಣ ಹಾಕುವುದು ಈ ದುಷ್ಟ ಕಾಂಗ್ರೆಸ್ಸಿನ ಮನಸ್ಥಿತಿ ಎಂದು ಶ್ರೀರಾಮ ಸೇನೆ ಸಂಘಟನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಪುನೀತ್ ಕೆರೆಹಳ್ಳಿ 2013 ರಿಂದ 2023 ರವರಗೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸಮಾಜದಲ್ಲಿ ಶಾಂತಿ‌ ಕದಡುವ ಯತ್ನ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪದೇ ಪದೇ ಭಾಗಿಯಾದ ಹಿನ್ನೆಲೆಯಲ್ಲಿ ಮೇಲಿಂದ‌ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಪುನೀತ್ ಕರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Join Whatsapp