ಪಾಕಿಸ್ತಾನ: ನಡು ರಸ್ತೆಯಲ್ಲಿ ಶ್ರೀಲಂಕಾ ನಾಗರಿಕನ ಮೇಲೆ ಬೆಂಕಿ ಹಚ್ಚಿ ಸಜೀವ ದಹನ

Prasthutha|

ಲಾಹೋರ್: ಧರ್ಮನಿಂದನೆ ಮಾಡಿದ್ದಾರೆಂಬ ಆರೋಪದಲ್ಲಿ ಶ್ರೀಲಂಕಾ ಮೂಲದ ಗಾರ್ಮೆಂಟ್ ಫ್ಯಾಕ್ಟರಿಯ ವ್ಯವಸ್ಥಾಪಕನ ಮೇಲೆ ಗುಂಪೊಂದು ದಾಳಿ ನಡೆಸಿ, ಬೆಂಕಿ ಹಚ್ಚಿ ನಡು ರಸ್ತೆಯಲ್ಲೇ ಸಜೀವ ದಹನ ಮಾಡಿದ ಅಮಾನವೀಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್’ನಲ್ಲಿ ನಡೆದಿದೆ.

- Advertisement -

ಲಾಹೋರ್’ನಿಂದ 100 ಕಿಲೋಮೀಟರ್ ದೂರದಲ್ಲಿರುವ ಸಿಯಾಲ್ ಕೋಟ್ ಜಿಲ್ಲೆಯಲ್ಲಿರುವ ರಾಜ್​ಕೋ ಇಂಡಸ್ಟ್ರೀಸ್ ಎಂಬ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾಂತಾ ಕುಮಾರ (40) ಎಂಬವರನ್ನು ಸಜೀವ ದಹನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಇದು ಇಡೀ ದೇಶವೇ ತಲೆತಗ್ಗಿಸುವ ವಿಚಾರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಹೇಯಕೃತ್ಯದಲ್ಲಿ  ಭಾಗಿಯಾದವರಿಗೆ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯಾಗುವಂತೆ ಮಾಡಲಾಗುವುದು ಎಂದಿದ್ದಾರೆ.

- Advertisement -
https://twitter.com/Gaamuk/status/1466790539504717831

ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಕುಮಾರ ಅವರು ಇತ್ತೀಚೆಗೆ ತೆಹ್ರೀಕ್ ಇ ಲಬ್ಬೈಕ್ ಪಾಕಿಸ್ತಾನ್ –TLP ಸಂಘಟನೆಯ ಕರಪತ್ರವೊಂದನ್ನು ಹರಿದು ಕಸದ ಬುಟ್ಟಿಗೆ ಹಾಕಿದ್ದರು. ಆ ಕರಪತ್ರದಲ್ಲಿ ಪವಿತ್ರ ಖುರ್’ಆನ್’ನ ಸಾಲುಗಳು ಇದ್ದ ಕಾರಣ, ಪ್ರಿಯಾಂತಾ ಧರ್ಮನಿಂದನೆ ಮಾಡಿದ್ದಾರೆಂದು ಆರೋಪಿಸಿ ಅವರನ್ನು ಹತ್ಯೆಗೈದು ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಧರ್ಮನಿಂದನೆ ಮಾಡಿರುವ ಆರೋಪ ಕೇಳಿ ಬಂದ ನಂತರ ಫ್ಯಾಕ್ಟರಿಯ ಹೊರಗೆ ನೂರಾರು ಮಂದಿ ಗುಂಪುಗೂಡಿದ್ದರು. ಇವರೆಲ್ಲರೂ TLP ಬೆಂಬಲಿಗರು ಎಂದು ಹೇಳಲಾಗಿದೆ. ಆಕ್ರೋಶಗೊಂಡ ಗುಂಪು ಫ್ಯಾಕ್ಟರಿಯೊಳಗೆ ನುಗ್ಗಿ ಕುಮಾರ ಅವರನ್ನು ಹೊರಗೆ ಎಳೆದು ತಂದು ಥಳಿಸಿ, ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.  ಈ ದೃಶ್ಯಗಳನ್ನು ಪರಿಶೀಲಿಸಿ ಶಂಕಿತ ನೂರು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ತಮ್ಮ ಪ್ರಜೆಯ ಅಮಾನುಷ ಹತ್ಯೆಗೆ ಶ್ರೀಲಂಕಾ ಆಘಾತ ವ್ಯಕ್ತಪಡಿಸಿದ್ದು, ಅಪರಾಧಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪಾಕಿಸ್ತಾನದಲ್ಲಿರುವ ಇತರ ಲಂಕಾ ನಾಗರಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀಲಂಕಾ ಅಧ್ಯಕ್ಷ ಗೋಟ್ಟಾಬಯ ರಾಜಪಕ್ಸ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಚೇರಿಗೆ ಕರೆ ಮಾಡಿ, ಆರೋಪಿಗಳ ವಿರುದ್ಧ ತತ್​ಕ್ಷಣವೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.

Join Whatsapp