ಏಷ್ಯಾ ಕಪ್‌: ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಸೋಲು, ಫೈನಲ್‌ ಕನಸು ಬಹುತೇಕ ಭಗ್ನ

Prasthutha|

ದುಬೈ: ಏಷ್ಯಾ ಕಪ್‌  ಸೂಪರ್‌-4 ಹಂತದ ತನ್ನ ಎರಡನೇ ಪಂದ್ಯದಲ್ಲೂ ಭಾರತ ರೋಚಕ ಸೋಲಿಗೆ ಶರಣಾಗಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇವಲ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿದ ಶ್ರೀಲಂಕಾ, ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಹಂತಕ್ಕೆ ತೇರ್ಗಡೆಯಾಗಿದೆ. ಮತ್ತೊಂದೆಡೆ ಭಾರತದ ಏಷ್ಯಾ ಕಪ್‌ ಫೈನಲ್‌ ಕನಸು ಬಹುತೇಕ ಅಂತ್ಯ ಕಂಡಂತಾಗಿದೆ. ಬುಧವಾರ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಗೆದ್ದರೆ, ಅಧಿಕೃತವಾಗಿ ಭಾರತ ಟೂರ್ನಿಯಿಂದ ಹೊರನಡೆಯಲಿದೆ.

- Advertisement -

174 ರನ್‌ಗಳ ಗೆಲುವಿನ ಗುರಿ ಪಡೆದಿದ್ದ ಲಂಕಾ, 19.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಅಮೋಘ ಗೆಲುವು ದಾಖಲಿಸಿತು.  ಇನ್ನಿಂಗ್ಸ್‌ ಆರಂಭಿಸಿದ ಶ್ರೀಲಂಕಾಗೆ  ಪಾತುಮ್‌ ನಿಸ್ಸಾಂಕ ಮತ್ತು ಕುಸಾಲ್‌ ಮೆಂಡಿಸ್‌ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 97 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ನಿಸ್ಸಾಂಕ  52 ರನ್‌ಗಳಿಸಿದರೆ, ಮೆಂಡಿಸ್‌ 57 ರನ್‌ಗಳಿಸಿದರು. ಇವರಿಬ್ಬರ ವಿಕೆಟ್‌ ಪಡೆದ ಯಜುವೇಂದ್ರ ಚಹಾಲ್‌, ಭಾರತಕ್ಕೆ ಬ್ರೇಕ್‌ ಒದಗಿಸಿಕೊಟ್ಟರು.

ಆ ಬಳಿಕ ಬಂದ ಚರಿತ್‌ ಅಸಲಂಕ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ಧನುಷ್‌ ಗುಣತಿಲಕ ಕೇವಲ 1 ರನ್‌ ಗಳಿಸಲಷ್ಟೇ ಶಕ್ತರಾದರು. ಹೀಗೆ 14.1 ಓವರ್‌ಗಳಲ್ಲಿ ಲಂಕಾ 110 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಬಳಿಕ ಒಂದಾದ ಭನುಕ ರಾಜಪಕ್ಷ (25 ರನ್‌*) ಮತ್ತು ನಾಯಕ ದಾಸುನ್‌ ಶನಕ (33ರನ್‌*) ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.  

- Advertisement -

ಭಾರತ 173/8

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ್ದ ಭಾರತ, ನಾಯಕ ರೋಹಿತ್‌ ಶರ್ಮಾ ಗಳಿಸಿದ ಆಕರ್ಷಕ ಅರ್ಧಶತಕದ (72 ರನ್‌)  ನೆರವಿನಿಂದ 8 ವಿಕೆಟ್‌ ನಷ್ಟದಲ್ಲಿ 173 ರನ್‌ ಗಳಿಸಿತ್ತು. ಸೂರ್ಯಕುಮಾರ್‌ ಯಾದವ್‌ 34 ರನ್‌ ಮತ್ತು ಹಾರ್ದಿಕ್‌ ಪಾಂಡ್ಯಾ, ರಿಷಭ್‌ ಪಂತ್‌ ತಲಾ 17 ರನ್‌ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ಆರ್‌ ಅಶ್ವಿನ್‌ 7 ಎಸೆತಗಳನ್ನು ಎದುರಿಸಿ 15 ರನ್‌ಗಳಿಸಿದರು. 

ಶ್ರೀಲಂಕಾ ಪರ ಬೌಲಿಂಗ್‌ನಲ್ಲಿದಿಲ್ಶಾನ್‌ ಮಧುಶಂಕ ಮೂರು ವಿಕೆಟ್‌, ಚಮಿಕ ಕರುಣರತ್ನೆ ಮತ್ತು ದಸುನ್‌ ಶನಕ ತಲಾ ಎರಡು ವಿಕೆಟ್‌  ಪಡೆದರು.

Join Whatsapp