ಭಾರತದ ಆತಂಕದ ನಡುವೆಯೂ ಚೀನಾದ ಶಂಕಿತ ‘ಬೇಹುಗಾರಿಕಾ’ ಹಡಗಿಗೆ ಬಂದರಿಗೆ ಅನುಮತಿ ನೀಡಿದ ಶ್ರೀಲಂಕಾ

Prasthutha|

ಕೊಲಂಬೊ: ನವದೆಹಲಿಯ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ ನಡೆಸಬಹುದೆಂಬ ಭಾರತದ ಆತಂಕದ ನಡುವೆಯೂ ಚೀನಾದ ವಿವಾದಿತ ಸಂಶೋಧನಾ ನೌಕೆಗೆ ಬಂದರಿಗೆ ಭೇಟಿ ನೀಡಲು ಶ್ರೀಲಂಕಾ ಸರಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಈ ಹಡಗು ಶ್ರೀಲಂಕಾದ ಹಂಬಂಟೋಟ‌ ಬಂದರಿಗೆ ಗುರುವಾರ ಆಗಸ್ಟ್ 11ರಂದು ಆಗಮಿಸಿ ಆ. 17ರ ವರೆಗೆ ಬಂದರಿನಲ್ಲಿ ಉಳಿಯುವಂತೆ ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಭಾರತ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಂದರು ಪ್ರವೇಶ ಮುಂದೂಡುವಂತೆ ಚೀನಾದ ರಾಯಭಾರ ಕಚೇರಿಗೆ ಶ್ರೀಲಂಕಾ ಮನವಿ ಮಾಡಿತ್ತು.

ಇದೀಗ ಶ್ರೀಲಂಕಾದಿಂದ ಅನುಮತಿ ದೊರೆತ ಹಿನ್ನಲೆಯಲ್ಲಿ ಈ ಹಡಗು ಆ. 16ಕ್ಕೆ ಬಂದರಿಗೆ ಆಗಮಿಸಿ ಆ. 22ರ ತನಕ ಅಲ್ಲಿ ಉಳಿಯಲಿದೆ.

- Advertisement -

‘ಯುವಾನ್ ವಾಂಗ್ 5’ ಎಂಬ ಹೆಸರಿನ ಈ ನೌಕೆಯು ಸಂಶೋಧನೆ ಮತ್ತು ಸಮೀಕ್ಷೆ ಸಂಬಂಧ ಹಡಗು ಎಂದು ಅಂತರರಾಷ್ಟ್ರೀಯ ಶಿಪ್ಪಿಂಗ್ ಮತ್ತು ವಿಶ್ಲೇಷಣಾ ತಾಣಗಳು ವಿವರಿಸಿದ್ದರೂ, ಇದು ದ್ವಿಬಳಕೆಯ ಬೇಹುಗಾರಿಕಾ ಹಡಗು ಎಂದು ಹೇಳಲಾಗುತ್ತಿದೆ.

ಹಿಂದೂಮಹಾಸಾಗರದಲ್ಲಿ ಬೀಜಿಂಗ್‌ನ ಹೆಚ್ಚುತ್ತಿರುವ ಉಪಸ್ಥಿತಿ ಶ್ರೀಲಂಕಾದ ಪ್ರಭಾವದ ಬಗ್ಗೆ ಭಾರತ ಶಂಕೆ ವ್ಯಕ್ತಪಡಿಸಿದ್ದು, ಇವೆರಡನ್ನೂ ಭಾರತ ಗಂಭೀರವಾಗಿ ಪರಿಗಣಿಸಿತ್ತು.

ಈ ಹಡಗಿಗೆ ಬಂದರಿಗೆ ಅನುಮತಿ ನೀಡುವುದರ ಕುರಿತು ಭಾರವು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಜೊತೆ ತನ್ನ ಕಳವಳ ವ್ಯಕ್ತಪಡಿಸಿದ್ದು, ಹಡಗನ್ನು ಡಾಕ್ ಮಾಡಲು ಏಕೆ ಅನುಮತಿಸಬಾರದು ಎಂಬ ಬಗ್ಗೆ “ತೃಪ್ತಿದಾಯಕ ಪ್ರತಿಕ್ರಿಯೆ” ನೀಡಲು ದೇಶವು ವಿಫಲವಾಗಿದೆ ಎಂದು ಶ್ರೀಲಂಕಾ ಸರಕಾರದ ಮೂಲಗಳು ತಿಳಿಸಿವೆ.