ಬಡ್ಡಿ ದಂಧೆಕೋರರ ವಿರುದ್ಧ ವಿಶೇಷವಾದ ಕಾನೂನು ರಚಿಸಿ ಮಟ್ಟ ಹಾಕಬೇಕು: ತಾಹೇರ್ ಹುಸೇನ್

Prasthutha|

ಬೆಂಗಳೂರು: ಬಡ್ಡಿ ದಂಗೆಕೋರರ ವಿರುದ್ದ ವಿಶೇಷ ಕಾನೂನು ರಚಿಸಿ  ಬಡ್ಡಿ ದಂಧೆಗೆ ಅಂತ್ಯ ಕಾಣಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಕರ್ನಾಟಕ ರಾಜ್ಯಾಧ್ಯಕ್ಷ  ಅಡ್ವಕೇಟ್ ತಾಹೇರ್ ಹುಸೇನ್ ಸರಕಾರವನ್ನು ಒತ್ತಾಯಿಸಿದರು.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತುಮಕೂರಿನಲ್ಲಿ ಇತ್ತೀಚೆಗೆ ಒಂದು ಕುಟುಂಬದ ಐವರು ಬಲಿಯಾದ ಘಟನೆಗೆ ಬಡ್ಡಿ ಮಾಫಿಯಾ ಕಾರಣ ಎನ್ನಲಾಗುತ್ತಿದೆ. ಈ ಬಡ್ಡಿ ದಂಧೆಯ ಕೂಪಕ್ಕೆ ಸಿಲುಕಿ ಅದೆಷ್ಟೋ ಸಾವುಗಳು ನಮ್ಮ ರಾಜ್ಯದಲ್ಲಿ ಸಂಭವಿಸುತ್ತಿವೆ. ರೈತರು, ಬಡ ಸಣ್ಣ ಪುಟ್ಟ ವ್ಯಾಪಾರಸ್ಥರು ಈ ದಂಧೆಗೆ ತುತ್ತಾಗುತ್ತಿದ್ದಾರೆ‌. ಇನ್ನೆಷ್ಟು ಅಮಾಯಕ ಕುಟುಂಬಗಳು ಈ ದಂಧೆಗೆ ಬಲಿಯಾಗಬೇಕು. ಸರಕಾರ ಈ ಬಗ್ಗೆ ಯಾಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರ ಬದಲಾದರೂ ಈ ವ್ಯವಹಾರ ಯಾವುದೇ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಇವರನ್ನು ಎದುರಿಸುವ ಶಕ್ತಿ ಬಡವರಿಗೆ ಇರುವುದಿಲ್ಲ. ಹತಾಶೆಯಿಂದ ತಪ್ಪು ದಾರಿ ಹಿಡಿಯುತ್ತಾರೆ. ಅನಾಹುತಕಾರಿ ಘಟನೆ ನಡೆದಾಗ ಒಮ್ಮೆ ಎಚ್ಚರವಾಗಿ ಸದ್ದು ಗದ್ದಲ ಮಾಡಿ ನಂತರ ಮರೆತು ತಣ್ಣಗಾಗುತ್ತದೆ. ಬಡ್ಡಿ ವ್ಯವಹಾರ ನಿರಂತರ ನಡೆಯುತ್ತಿದೆ. ಅಲ್ಲಲ್ಲಿ ಅಣಬೆಗಳಂತೆ ಫೈನಾನ್ಸ್ ಕಂಪೆನಿ ಹುಟ್ಟಿಕೊಳ್ಳುತ್ತದೆ. ಈ ಪಿಡುಗಿಗೆ ತಡೆ ಹಾಕಲು ವಿಶೇಷ ಕಾನೂನು ತರುವ ಅಗತ್ಯವಿದೆ. ವಿರೋಧ ಪಕ್ಷಗಳು ಕೂಡ ಜನತೆಯನ್ನು ಲೂಟಿ ಅವರ ಬದುಕನ್ನೇ ನರಕ ಸದೃಶ ಮಾಡುವ ಈ ದಂಧೆಯ ವಿರುದ್ದ ದನಿಯೆತ್ತಬೇಕು. ಇದು ಜನರ ಬದುಕನ್ನೇ ಕೊಯ್ಯುವ ದಂಧೆಯಾಗಿದೆ. ಜನರು ಕೂಡ ಈ ದಂಧೆಗೆ ಬಲಿಬೀಳಬಾರದು. ಕುಟುಂಬಕ್ಕೆ ಮಾರಕವಾದ ಈ ಪಿಡುಗಿನಿಂದ ದೂರ ಉಳಿಯಬೇಕು. ಮುಖ್ಯ ಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮಟ್ಟ ಹಾಕಲು ಪ್ರಯತ್ನಿಸಬೇಕು. ಬಡ್ಡಿ ಮಾಫಿಯಾ ನಡೆಸುವ ದಬ್ಬಾಳಿಕೆಗೆ ಶೀಘ್ರವಾಗಿ ತಡೆ ಹಾಕಬೇಕು” ಎಂದು ಅವರು ಆಗ್ರಹಿಸಿದರು.

Join Whatsapp