ಮಂಗಳೂರು: ಅಕ್ರಮವಾಗಿ ಬಂಧಿಸಿದ್ದ ಪಾಪ್ಯುಲರ್ ಫ್ರಂಟ್ ನಾಯಕರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಬರ್ಬರವಾಗಿ ಲಾಠಿಚಾರ್ಚ್ ನಡೆಸಿದ ಉಪ್ಪಿನಂಗಡಿ ಪೊಲೀಸರ ಕೃತ್ಯವನ್ನು ಖಂಡಿಸಿ ಹಾಗೂ ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಡಿಸೆಂಬರ್ 17ರಂದು ಎಸ್.ಪಿ. ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿ ಹಲ್ಲೆ ಪ್ರಕರಣದ ತಪ್ಪಿತಸ್ಥರನ್ನು ಬಂಧಿಸುವುದು ಪೊಲೀಸರ ಕರ್ತವ್ಯ. ಆದರೆ ಪೊಲೀಸರು, ಆರೋಪಿಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಅಮಾಯಕರನ್ನು ಬಂಧಿಸಿ ಕೈತೊಳೆದುಕೊಳ್ಳಲು ನೋಡಿದ್ದಾರೆ. ನ್ಯಾಯ ಕೇಳಲು ಹೋದವರ ಮೇಲೆ ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಇಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು. ಲಾಠಿಚಾರ್ಜ್ ನಿಂದ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು. ಇಬ್ಬರು ಮುಖಂಡರ ವಿರುದ್ಧ ದಾಖಲಿಸಿರುವ ಸುಳ್ಳು ಕೇಸನ್ನು ಹಿಂದಕ್ಕೆ ಪಡೆದು ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎಸ್ .ಪಿ. ಆಫೀಸ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂರು ಮಂದಿಯನ್ನು ಅಕ್ರಮವಾಗಿ ಬಂಧಿಸಿದ್ದರು. ಆದರೆ ಬಂಧನದ ವೇಳೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ ಮತ್ತು ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನಕಾರರು ಬೆಳಗ್ಗೆ ಠಾಣೆ ಮುಂದೆ ಜಮಾಯಿಸಿದಾಗಲಷ್ಟೇ ಸ್ಥಳೀಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆ ತಂದಿದ್ದೇವೆಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಆದರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರಲ್ಲಿ ಎಳ್ಳಷ್ಟೂ ಆಧಾರವಿರಲಿಲ್ಲ. ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದು ಧರಣಿ ಕುಳಿತರು. ಕತ್ತಲು ಆವರಿಸಿದರೂ ಪ್ರತಿಭಟನಕಾರರು ಅಲ್ಲಿಂದ ಕದಲದೇ ಇದ್ದಾಗ ರಾತ್ರಿ ಸುಮಾರು 7ರ ವೇಳೆಗೆ ಓರ್ವ ನಾಯಕರನ್ನು ಬಿಡುಗಡೆಗೊಳಿಸಿದ್ದರು. ಇನ್ನಿಬ್ಬರನ್ನು ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸುವುದಾಗಿ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದರು. ಆದರೆ ತುಂಬಾ ಸಮಯದ ನಂತರವೂ ಅವರನ್ನು ಬಿಡುಗಡೆಗೊಳಿಸುವ ಲಕ್ಷಣ ಕಂಡು ಬರಲಿಲ್ಲ. ಅವರಿಬ್ಬರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಸೂಚನೆ ಕಂಡು ಬಂದಾಗ, ಉಳಿದಿಬ್ಬರು ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಮತ್ತೆ ಪ್ರತಿಭಟನೆಯನ್ನು ಮುಂದುವರಿಸಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸರು ಯಾವುದೇ ಸೂಚನೆ ನೀಡದೇ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಕಾರರು ಗಂಭೀರ ಗಾಯಗೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಮಾತನಾಡಿ, ಪೊಲೀಸರ ಈ ರಾಕ್ಷಸೀಯ ವರ್ತನೆ ಖಂಡನಾರ್ಹ. ಬರ್ಬರ ಲಾಠಿಚಾರ್ಜ್ ನಿಂದಾಗಿ ಪ್ರತಿಭಟನಕಾರರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಮುಸ್ಲಿಮರ ಧಾರ್ಮಿಕ ಗುರು ಸೈಯ್ಯದ್ ಆತೂರ್ ತಂಙಳ್ ರವರ ತಲೆಗೆ ಗಂಭೀರ ಗಾಯವಾಗಿದೆ. ಗಾಯದ ತೀವ್ರತೆಯನ್ನು ಗಮನಿಸಿದರೆ ಪೊಲೀಸರು ಲಾಠಿಗೆ ಬದಲಾಗಿ ಯಾವುದೋ ಮಾರಕಾಸ್ತ್ರ ಬಳಸಿರುವ ಬಗ್ಗೆ ಸಂಶಯ ಮೂಡುತ್ತದೆ. ಇದೇ ವೇಳೆ ಲಾಠಿ ಏಟಿಗೆ ಯುವಕನೋರ್ವ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ಕರುಣಾಜನಕ ದೃಶ್ಯವೂ ಕಂಡು ಬಂತು. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಮತ್ತು ಸುಮಾರು 40ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರು ಆ್ಯಂಬುಲೆನ್ಸ್ ಮೇಲೆಯೂ ಲಾಠಿ ಬೀಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೇ ವೇಳೆ ಆ್ಯಂಬುಲೆನ್ಸ್ ವೊಂದನ್ನು ಠಾಣೆ ಬಳಿ ತಡೆ ಹಿಡಿದಿದ್ದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ತೀವ್ರ ಅಡಚಣೆ ಉಂಟು ಮಾಡಿದ್ದರು. ಈ ಮಧ್ಯೆ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದ ನಾಯಕರ ಮೇಲೆಯೂ ಲಾಠಿ ಬೀಸಿ ಉದ್ದಟತನದಿಂದ ವರ್ತಿಸಲಾಗಿದೆ ಎಂದು ಅಶ್ರಫ್ ಆರೋಪಿಸಿದರು.
ನಿಮ್ಮನ್ನು ಬಿಡುಗಡೆ ಮಾಡಬೇಕಾದರೆ ಅವರನ್ನು ಕರೆ ತನ್ನಿ ಎಂದು ಬಾರ್ಗೈನ್ ಗೆ ಪೊಲೀಸರು ಇಳಿದಿದ್ದರು. ತನಿಖೆಗೆ ನಾವು ಕೂಡ ಸಹಕಾರ ನೀಡಿದ್ದೆವು. ಜಿಲ್ಲೆಯ ನಾಯಕರು ಪೊಲೀಸ್ ಠಾಣೆಗೆ ಹೋಗಿ ಡಿವೈಎಸ್ ಪಿ ಜೊತೆ ಮಾತುಕತೆ ನಡೆಸಿ ಪ್ರತಿಭಟನಕಾರರನ್ನು ಚದುರಿಸಲು ಮುಂದಾಗುತ್ತಿದ್ದಂತೆ ಏಕಾಏಕಿ 144 ಸೆಕ್ಷನ್ ಜಾರಿ ಮಾಡಿ ಲಾಠಿಪ್ರಹಾರ ನಡೆಸಲಾಗಿದೆ. ನೆಲದ ಮೇಲೆ ಕುಳಿತಿದ್ದ ಪ್ರತಿಭಟನಕಾರರ ತಲೆಯ ಮೇಲೆ ಲಾಠಿಯಿಂದ ಹಲ್ಲೆ ನಡೆಸಲಾಗಿದೆ. ಇದು ಯಾರಿಗೂ ಕಾಣಬಾರದು ಎಂಬ ಉದ್ದೇಶದಿಂದ ಬೀದಿ ದೀಪ ಆರಿಸಲಾಗಿದೆ. ಇದು ವ್ಯವಸ್ಥಿತವಾಗಿ ನಡೆದ ಹಲ್ಲೆಯಾಗಿದೆ ಎಂದು ಅಶ್ರಫ್ ಆರೋಪಿಸಿದರು.
ಪೊಲೀಸರ ಬಲಪ್ರಯೋಗ ಯಾವಾಗಲೂ ಮುಸ್ಲಿಮ್ ಯುವಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಪುತ್ತೂರು ಡಿವೈಎಸ್ ಪಿಯವರನ್ನು ಏಕ ವಚನದಲ್ಲಿ ಬೈದು ಛೀಮಾರಿ ಹಾಕುವಾಗ, ಜಿಲ್ಲಾಧಿಕಾರಿಯವರ ಕಾಲರ್ ಪಟ್ಟಿ ಹಿಡಿಯುತ್ತೇವೆ ಎನ್ನುವಾಗ, ಸುಳ್ಯ ಎಸ್ ಐ ಅವರಿಗೆ ಹೊರಗೆ ಬಾ ನೋಡಿಕೊಳ್ಳುತ್ತೇವೆ ಎಂದು ಬಹಿರಂಗ ಬೆದರಿಕೆ ಹಾಕುವಾಗ ಪೊಲೀಸ್ ಲಾಠಿ ಮೌನವಾಗಿರುತ್ತದೆ. ಕಾನೂನುಬದ್ಧವಾಗಿ ನ್ಯಾಯ ಕೇಳಲು ಪ್ರತಿಭಟನೆ ನಡೆಸಿದಾಗ ಮಾತ್ರ ಪೊಲೀಸರ ಲಾಠಿ ಮಾತನಾಡುತ್ತದೆ ಎಂದಾದರೆ ಪೊಲೀಸರ ನೈತಿಕತೆಯನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದರು.
ಕೌಂಟರ್ ಕೇಸು ದಾಖಲಿಸುವ ಉದ್ದೇಶದಿಂದ ಬಂಟ್ವಾಳ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ, ತಮ್ಮ ಕೈಗೆ ಚೂರಿ ಇರಿತವಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ತಳಮಟ್ಟದ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಅವರ ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಉನ್ನತಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುವುದನ್ನು ಇನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.