ಬೆಲ್ಜಿಯಂ: ಅನಾರೋಗ್ಯಪೀಡಿತ ತನ್ನ ಪತಿಯ ಆರೈಕೆ ಮಾಡಲು ಬೆಲ್ಜಿಯಂ ನ ಸೋಫಿ ವಿಲ್ಮ್ಸ್ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ. ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ.
ಸೋಫಿ ಅವರ ಪತಿ ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಉಪ ಪ್ರಧಾನಿ ಸ್ಥಾನದಲ್ಲಿ ಇದ್ದುಕೊಂಡು ಅದರ ಕರ್ತವ್ಯದ ನಡುವೆ ಗಂಡ-ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ತಾವು ರಾಜೀನಾಮೆ ನೀಡುವುದಾಗಿ ಸೋಫಿ ಘೋಷಿಸಿದ್ದಾರೆ.
ಸೋಫಿ, 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. 2019ರಿಂದ 2020ರವರೆಗೆ ಬೆಲ್ಜಿಯಂನ ಪ್ರಧಾನ ಮಂತ್ರಿಯಾಗಿದ್ದರು. ಸುಧಾರಣಾವಾದಿ ಚಳವಳಿಯ ಸದಸ್ಯೆಯಾದ ಅವರು ಎರಡೂ ಪ್ರಮುಖ ಸ್ಥಾನಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.
2014 ರಲ್ಲಿ ಚೇಂಬರ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದರು. 2015ರಿಂದ 2019ರವರೆಗೆ ಚಾರ್ಲ್ಸ್ ಮೈಕೆಲ್ ಅವರ ಮೊದಲ ಮತ್ತು ಎರಡನೆಯ ಸರ್ಕಾರಗಳಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದರು. ಕೋವಿಡ್-19 ಸಮಯದಲ್ಲಿ ಕರೊನಾ ನಿಭಾಯಿಸುವ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದರು.