ನೀವು ಮಾಡುತ್ತಿರುವ ಬೆದರಿಕೆ ರೂಪದ ಆರೋಪಗಳಿಗೆ ನಾವು ಬಗ್ಗುವವರಲ್ಲ: ಸಚಿವ ಅಶ್ವತ್ಥನಾರಾಯಣಗೆ ಸಿದ್ದರಾಮಯ್ಯ ತಿರುಗೇಟು

Prasthutha|

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯ ಹಗರಣಗಳನ್ನು ತನಿಖೆಗೆ ಒತ್ತಾಯಿಸಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಿರುವ ಸಚಿವ ಅಶ್ವತ್ಥನಾರಾಯಣ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಇದೇ ರೀತಿ ಪಿ.ಎಸ್.ಐ ನೇಮಕಾತಿ ಹಗರಣದಲ್ಲಿ ಅವರ ಮೇಲಿನ ಆರೋಪಗಳ ಬಗ್ಗೆಯೂ ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲು ಕೇಳಿಕೊಳ್ಳುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು, ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ? ಎಂದು ಕುಟುಕಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆಯದಂತೆ ತಡೆಯಲು ನೀವು ಮಾಡುತ್ತಿರುವ ಬೆದರಿಕೆ ರೂಪದ ಆರೋಪಗಳಿಗೆ ನಾವು ಬಗ್ಗುವವರಲ್ಲ. ಈ ರೀತಿಯ ಈ ಬ್ಲಾಕ್ ಮೇಲ್ ತಂತ್ರದಿಂದ ನಮ್ಮ ಬಾಯಿ ಮುಚ್ಚಿಸಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

- Advertisement -

ನಿಮ್ಮ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತನಿಖೆಗಾಗಿ ಇಡೀ ವಿಧಾನಸೌಧವನ್ನೇ ತನಿಖಾ ಸಂಸ್ಥೆಗಳಿಗೆ ಬಿಟ್ಟುಕೊಡಬೇಕಾಗಬಹುದು ಅಶ್ವತ್ಥ ನಾರಾಯಣ ಅವರೇ?. ಸಚಿವರು ಬೇರೇನೂ ಕೆಲಸ ಮಾಡದೆ ತನಿಖಾಧಿಕಾರಿಗಳ ಮುಂದೆ ನಿತ್ಯ ವಿಚಾರಣೆಗೆ ಹಾಜರಿ ಹಾಕಬೇಕಾಗಬಹುದು. ಇದಕ್ಕಿಂತ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.

Join Whatsapp